
ರಾಮಗಢ: ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹಾಗೂ ಜೆಎಂಎಂ ಸಂಸ್ಥಾಪಕ ಶಿಬು ಸೊರೇನ್ ಅವರ ಅಂತ್ಯಕ್ರಿಯೆಯನ್ನು ಮಂಗಳವಾರ ರಾಮಗಢ ಜಿಲ್ಲೆಯ ನೆಮ್ರಾದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಶಿಬು ಸೊರೇನ್ ಅವರು ಸೋಮವಾರ ದೆಹಲಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಇಂದು ಅವರ ಹುಟ್ಟುರು ನೆಮ್ರಾದಲ್ಲಿ ಪೂರ್ಣ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು.
ಅವರ ಹಿರಿಯ ಮಗ ಮತ್ತು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಚಿತೆಗೆ ಬೆಂಕಿ ಹಚ್ಚುತ್ತಿದ್ದಂತೆ, ಜನ 'ಗುರೂಜಿ ಅಮರ್ ರಹೇ' ಎಂಬ ಘೋಷಣೆ ಕೂಗಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಹಲವು ನಾಯಕರು ರಾಷ್ಟ್ರ ರಾಜಧಾನಿಯಲ್ಲಿ ಅಗಲಿದ 81 ವರ್ಷದ ನಾಯಕನಿಗೆ ಗೌರವ ಸಲ್ಲಿಸಿದ್ದರು.
ಶಿಬು ಸೊರೆನ್ ಮೂರು ಬಾರಿ ಜಾರ್ಖಂಡ್‌ನ ಮುಖ್ಯಮಂತ್ರಿಯಾಗಿ (2005, 2008-09, 2009-10) ಸೇವೆ ಸಲ್ಲಿಸಿದ್ದರು. ಇದರ ಜೊತೆಗೆ, 2004-06ರ ಅವಧಿಯಲ್ಲಿ ಮೂರು ಬಾರಿ ಕೇಂದ್ರ ಕಲ್ಲಿದ್ದಲು ಸಚಿವರಾಗಿ, 1980-2019ರವರೆಗೆ ದುಮ್ಕಾದಿಂದ ಲೋಕಸಭಾ ಸಂಸದರಾಗಿ ಮತ್ತು ಪ್ರಸ್ತುತ ರಾಜ್ಯಸಭಾ ಸಂಸದರಾಗಿ ಕಾರ್ಯನಿರ್ವಹಿಸಿದ್ದರು.ಶಿಬು ಸೊರೆನ್ ತಮ್ಮ ಪತ್ನಿ ರೂಪಿ ಸೊರೆನ್, ಮಕ್ಕಳಾದ ದುರ್ಗಾ ಸೊರೆನ್ (2009ರಲ್ಲಿ ನಿಧನ), ಅಂಜಲಿ ಸೊರೆನ್ (ಸಮಾಜ ಸೇವಕಿ), ಹೇಮಂತ್ ಸೊರೆನ್ (ಜಾರ್ಖಂಡ್‌ನ ಪ್ರಸ್ತುತ ಮುಖ್ಯಮಂತ್ರಿ), ಮತ್ತು ಬಸಂತ್ ಸೊರೆನ್ (JMM ಯುವ ವಿಭಾಗದ ಮುಖ್ಯಸ್ಥ) ಅವರನ್ನು ಅಗಲಿದ್ದಾರೆ.
Advertisement