
ಋಷಿಕೇಶ: ನಿರಂತರ ಭಾರೀ ಮಳೆಯಿಂದಾಗಿ ಉತ್ತರಾಖಂಡದ ಪವಿತ್ರ ಧಾರ್ಮಿಕ ಕ್ಷೇತ್ರ ಋಷಿಕೇಶದಲ್ಲಿ ಗಂಗಾ ನದಿಯ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ಪರಮಾರ್ಥ ನಿಕೇತನ ಆಶ್ರಮದ ಆರತಿ ಸ್ಥಳದಲ್ಲಿರುವ ಶಿವನ ವಿಗ್ರಹ ಮುಳುಗಡೆಯ ಭೀತಿಯಲ್ಲಿದೆ.
ಈ ಕುರಿತು ANI ಸುದ್ದಿಸಂಸ್ಥೆ ಜೊತೆಗೆ ಮಾತನಾಡಿದ ಪರಮಾರ್ಥ ನಿಕೇತನ ಆಶ್ರಮದ ಉದ್ಯೋಗಿ ಪಂಕಜ್ ಕುಮಾರ್ ದ್ವಿವೇದಿ, ಉತ್ತರ ಕಾಶಿಯಲ್ಲಿ ಮಂಗಳವಾರ ಸಂಭವಿಸಿದ ಮೇಘಸ್ಫೋಟದಿಂದಾಗಿ ನೀರಿನ ಮಟ್ಟ ಅಪಾಯದ ಮಟ್ಟಕ್ಕಿಂತ ಹೆಚ್ಚಿದೆ. ಸುರಕ್ಷತಾ ಕಾರಣಗಳಿಂದ ನದಿ ದಡದ ಬಳಿ ಜನರಿಗೆ ಪ್ರವೇಶ ನೀಡುತ್ತಿಲ್ಲ. ಘಾಟ್‌ಗಳ ಎಲ್ಲಾ ಪ್ರವೇಶದ್ವಾರಗಳಿಗೆ ಬೀಗ ಹಾಕಲಾಗಿದೆ ಎಂದು ಹೇಳಿದರು.
ಪರಮಾರ್ಥದಲ್ಲಿ ಗಂಗಾನದಿಯ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಶಿವನ ವಿಗ್ರಹವೂ ಮುಳುಗಲು ಪ್ರಾರಂಭಿಸಿದೆ. ನಿನ್ನೆ ಉತ್ತರಕಾಶಿಯಲ್ಲಿ ಸಂಭವಿಸಿದ ಮೇಘ ಸ್ಪೋಟದಿಂದಾಗಿ ಇಲ್ಲಿ ನೀರಿನ ಮಟ್ಟದಲ್ಲಿ ಅಪಾಯಕಾರಿಯಾಗಿ ಹೆಚ್ಚಾಗಿದೆ. ನಾವು ತುಂಬಾ ಜಾಗರೂಕರಾಗಿರಬೇಕು. ಇತರರಿಗೆ ಸಾಧ್ಯವಾದಷ್ಟು ಸಹಾಯ ಮಾಡಬೇಕಾಗಿದೆ. ಇದು ದೊಡ್ಡ ದುರಂತ" ಎಂದರು.
ಉತ್ತರಕಾಶಿಯಲ್ಲಿ ನೀರಿನ ಮಟ್ಟ ಸಾಕಷ್ಟು ಏರಿಕೆಯಾಗಿದ್ದು, ಗಂಗಾನದಿಯ ದಡದ ಬಳಿ ಯಾರೂ ಹೋಗದಂತೆ ಸೂಚಿಸಿದ್ದೇವೆ. ಜನರನ್ನು ಸುರಕ್ಷಿತವಾಗಿರಿಸಲು ಘಾಟ್‌ಗಳ ಎಲ್ಲಾ ಪ್ರವೇಶದ್ವಾರಗಳಿಗೆ ಬೀಗ ಹಾಕಲಾಗಿದೆ ಎಂದು ಅವರು ತಿಳಿಸಿದರು.
ಇದಕ್ಕೂ ಮುನ್ನ ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಉತ್ತರಕಾಶಿಯ ಧರಾಲಿಯಲ್ಲಿ ಮೇಘಸ್ಫೋಟ ಮತ್ತು ಪ್ರವಾಹವನ್ನು ನಿರ್ಣಯಿಸಲು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದಲ್ಲಿ (ಇಒಸಿ) ವಿಪತ್ತು ನಿರ್ವಹಣಾ ಸಭೆ ನಡೆಸಿದರು.
ರಾಜ್ಯ ಸರ್ಕಾರ ಸಂಪೂರ್ಣ ಸನ್ನದ್ಧತೆಯೊಂದಿಗೆ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ಮುಖ್ಯಮಂತ್ರಿ ಧಾಮಿ ಪ್ರಧಾನಿಗೆ ತಿಳಿಸಿದ್ದಾರೆ. ನಿರಂತರ ಭಾರೀ ಮಳೆಯಿಂದಾಗಿ ಕೆಲವು ಪ್ರದೇಶಗಳಲ್ಲಿ ತೊಂದರೆಗಳು ಆಗಿವೆ. ಆದರೆ ಸಂತ್ರಸ್ತ ಜನರಿಗೆ ತ್ವರಿತ ನೆರವು ನೀಡಲು ಸಂಬಂಧಿಸಿದ ಎಲ್ಲಾ ಸಂಸ್ಥೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿವೆ.
Advertisement