
ಶ್ರೀನಗರ: ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಪುನಃಸ್ಥಾಪಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಶನಿವಾರ ಶ್ರೀನಗರದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದೆ.
ಜಮ್ಮು ಮತ್ತು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿ(ಜೆಕೆಪಿಸಿಸಿ) ಅಧ್ಯಕ್ಷ ತಾರಿಕ್ ಕರ್ರಾ ಅವರು ಇಲ್ಲಿನ ಎಂಎ ರಸ್ತೆಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಇಂದಿನಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಕರ್ರಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಮ್ ಅಹ್ಮದ್ ಮಿರ್ ಮತ್ತು ಪಕ್ಷದ ಶಾಸಕರು ಸೇರಿದಂತೆ ಇತರ ಹಿರಿಯ ನಾಯಕರು ಈ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಾರೆ.
ಭಾನುವಾರ ಜಮ್ಮುವಿನಲ್ಲಿ ಇದೇ ರೀತಿಯ ಉಪವಾಸ ಸತ್ಯಾಗ್ರಹ ನಡೆಯಲಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕರ್ರಾ, ಕಾಂಗ್ರೆಸ್, "ಕೇಂದ್ರದಲ್ಲಿ ಅಧಿಕಾರದಲ್ಲಿರುವ ಕುರುಡು, ಕಿವುಡ ಮತ್ತು ಮೂಕ ಸರ್ಕಾರವನ್ನು ಜಾಗೃತಗೊಳಿಸುವ ಹೋರಾಟ"ವನ್ನು ಪ್ರಾರಂಭಿಸಿದೆ ಎಂದು ಹೇಳಿದರು.
ಇಂದು "'ಕ್ವಿಟ್ ಇಂಡಿಯಾ ಚಳುವಳಿ' ಪ್ರಾರಂಭವಾದ ದಿನವಾದ್ದರಿಂದ ನಾವು ಈ ದಿನವನ್ನು ಆಯ್ಕೆ ಮಾಡಿದ್ದೇವೆ. ಆಗಸ್ಟ್ 9 ರಿಂದ ಆಗಸ್ಟ್ 21 ರವರೆಗೆ, ಪಕ್ಷವು ಜಮ್ಮು ಮತ್ತು ಕಾಶ್ಮೀರದ ವಿವಿಧ ಜಿಲ್ಲೆಗಳಲ್ಲಿ ಆರು ಉಪವಾಸ ಸತ್ಯಾಗ್ರಹಗಳನ್ನು ನಡೆಸುತ್ತದೆ" ಎಂದು ಅವರು ಹೇಳಿದರು.
ಆಗಸ್ಟ್ 5, 2019ರಂದು ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿತು. ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತು.
Advertisement