
ಕಾಶಿ: ಬನಾರಸ್ ಹಿಂದೂ ವಿಶ್ವವಿದ್ಯಾಲಯ(ಬಿಎಚ್‌ಯು)ದ ಆವರಣದೊಳಗೆ ಮಂಗಳವಾರ ಬೆಳಗಿನ ಜಾವ ಎಂಬಿಬಿಎಸ್ ವಿದ್ಯಾರ್ಥಿನಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ವಿವಿಯ ಮೂವರು ಮಾಜಿ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಬೆಳಗಿನ ಜಾವ 3:30 ರ ಸುಮಾರಿಗೆ ವಿದ್ಯಾರ್ಥಿನಿ ತನ್ನ ಸ್ನೇಹಿತರೊಂದಿಗೆ ಗ್ರಂಥಾಲಯದಿಂದ ತನ್ನ ಹಾಸ್ಟೆಲ್‌ಗೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಕಾಶಿ ವಲಯದ ಉಪ ಪೊಲೀಸ್ ಆಯುಕ್ತ(ಡಿಸಿಪಿ) ಗೌರವ್ ಬನ್ಸ್ವಾಲ್ ಅವರು ಹೇಳಿದ್ದಾರೆ.
ಬನ್ಸ್ವಾಲ್ ಪ್ರಕಾರ, ಮೋಟಾರ್ ಸೈಕಲ್‌ನಲ್ಲಿ ಬಂದ ಮೂವರು ಯುವಕರು ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅಲ್ಲದೆ ಆಕೆಯ ಮೇಲೆ ಹಲ್ಲೆಗೂ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ವಿದ್ಯಾರ್ಥಿನಿಯ ಸಹಪಾಠಿಯೊಬ್ಬರು ನೀಡಿದ ಲಿಖಿತ ದೂರಿನ ಆಧಾರದ ಮೇಲೆ, ಆರೋಪಿಗಳ ವಿರುದ್ಧ ಕಿರುಕುಳ ಮತ್ತು ಹಲ್ಲೆಗೆ ಸಂಬಂಧಿಸಿದ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
"ಮೂವರು ಆರೋಪಿಗಳು ಬಿಎಚ್‌ಯುನ ಮಾಜಿ ವಿದ್ಯಾರ್ಥಿಗಳಾಗಿದ್ದು, ಅವರನ್ನು ಬಂಧಿಸಲಾಗಿದೆ. ಪೊಲೀಸರು ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ ಮತ್ತು ಈ ವಿಷಯದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದು ಬನ್ಸ್ವಾಲ್ ತಿಳಿಸಿದ್ದಾರೆ.
Advertisement