
ನವದೆಹಲಿ: ರಾಜ್ಯಸಭೆಯ ಮಾಜಿ ಸಭಾಪತಿಗಳಾದ ಜಗದೀಪ್ ಧಂಖರ್ ಅವರು ಜುಲೈ 21 ರ ಸಂಜೆಯಿಂದ ಕಾಣೆಯಾಗಿದ್ದಾರೆ ಮತ್ತು ಅಂದಿನಿಂದ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ, ಅವರ ಬಗ್ಗೆ ಕೇಳಿಲ್ಲ, ಓದಿಲ್ಲ ಎಂದು ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಟೀಕಾಸ್ತ್ರ ಮುಂದುವರಿಸಿದ್ದಾರೆ.
ತೆಲುಗು ಮಾಧ್ಯಮವೊಂದು ಮಾಜಿ ಉಪರಾಷ್ಟ್ರಪತಿಗಳು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ 45 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಜ್ಯಸಭಾ ಮಾಜಿ ಅಧ್ಯಕ್ಷರು ಜುಲೈ 21 ರ ಸಂಜೆಯಿಂದ ಕಾಣೆಯಾಗಿದ್ದಾರೆ, ನಂತರ ಅವರನ್ನು ನೋಡಲಿಲ್ಲ, ಕೇಳಲಿಲ್ಲ, ಅವರ ಬಗ್ಗೆ ಎಲ್ಲಿಯೂ ಓದಿಲ್ಲ. ಆದರೆ ತೆಲುಗು ಮಾಧ್ಯಮ ಪ್ರಕಾರ, ರಾಜ್ಯಸಭಾ ಮಾಜಿ ಅಧ್ಯಕ್ಷರು ಇತ್ತೀಚೆಗೆ ಪ್ರಧಾನಿಯನ್ನು 45 ನಿಮಿಷಗಳ ಕಾಲ ಭೇಟಿಯಾದರು. ಹಾಗಾದರೆ ಏನು ನಡೆಯುತ್ತಿದೆ?" ಎಂದು ಎಕ್ಸ್ ಪೋಸ್ಟ್ ನಲ್ಲಿ ಜೈರಾಂ ರಮೇಶ್ ಪ್ರಶ್ನಿಸಿದ್ದಾರೆ.
ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಜಗದೀಪ್ ಧಂಖರ್ ಬಗ್ಗೆ ಪತ್ರ ಬರೆದಿದ್ದಾರೆ.
ನಮ್ಮ ಮಾಜಿ ಉಪ ರಾಷ್ಟ್ರಪತಿಗಳಿಗೆ ಏನಾಗಿದೆ, ಅವರು ಎಲ್ಲಿದ್ದಾರೆ? ಅವರ ಆರೋಗ್ಯ ಹೇಗಿದೆ? ಅವರು ಸುರಕ್ಷಿತವಾಗಿದ್ದಾರೆಯೇ? ಈ ಪ್ರಶ್ನೆಗಳ ಬಗ್ಗೆ ರಾಷ್ಟ್ರಕ್ಕೆ ಸತ್ಯ ತಿಳಿಯಬೇಕಿದೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ವಾಸ್ತವವಾಗಿ, ರಾಜ್ಯಸಭೆಯ ಕೆಲವು ಸಹೋದ್ಯೋಗಿಗಳು ಸುಪ್ರೀಂ ಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿಯನ್ನು ಸಲ್ಲಿಸುವ ಬಗ್ಗೆಯೂ ಯೋಚಿಸುತ್ತಿದ್ದಾರೆ, ಧಂಖರ್ ಅವರು ಎಲ್ಲಿದ್ದಾರೆ, ಅವರು ಆರೋಗ್ಯವಾಗಿದ್ದಾರೆಯೇ, ಸುರಕ್ಷಿತವಾಗಿದ್ದಾರೆಯೇ ಎಂದು ತಿಳಿದುಕೊಳ್ಳುವ ಕುತೂಹಲದಲ್ಲಿದ್ದಾರೆ.
ಮೊನ್ನೆ ಶನಿವಾರ ರಾಜ್ಯಸಭೆ ಸಂಸದ ಕಪಿಲ್ ಸಿಬಲ್, ಮಾಜಿ ಉಪ ರಾಷ್ಟ್ರಪತಿ ಜಗದೀಪ್ ಧಂಖರ್ ರಾಜೀನಾಮೆ ನೀಡಿದ ನಂತರ ಅವರು ಎಲ್ಲಿದ್ದಾರೆಂದು ತಿಳಿದಿಲ್ಲ ಎಂದು ಹೇಳಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ವಿಷಯದ ಬಗ್ಗೆ ಹೇಳಿಕೆ ನೀಡಬೇಕೆಂದು ಒತ್ತಾಯಿಸಿದ್ದರು.
ಅವರ ರಾಜೀನಾಮೆಯ ನಂತರ, ಅವರು ಎಲ್ಲಿದ್ದಾರೆ ಎಂಬುದರ ಬಗ್ಗೆ ನಮಗೆ ಏನೂ ತಿಳಿದಿಲ್ಲ. ನಾನು ಈ ಹಿಂದೆ 'ಲಾಪಾಟಾ ಲೇಡೀಸ್' ಬಗ್ಗೆ ಕೇಳಿದ್ದೆ, ಆದರೆ 'ಲಾಪಾಟಾ' ಉಪಾಧ್ಯಕ್ಷರ ಬಗ್ಗೆ ಕೇಳಿದ್ದು ಇದೇ ಮೊದಲು" ಎಂದು ಸಿಬಲ್ ಸುದ್ದಿಗಾರರಿಗೆ ಹೇಳಿದ್ದರು.
ದೇಶದ ಮುಂದಿನ ಉಪ ರಾಷ್ಟ್ರಪತಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆ ಆರಂಭಗೊಂಡಿದ್ದು, ಸೆಪ್ಟೆಂಬರ್ 9 ರಂದು ಚುನಾವಣೆ ನಡೆಯಲಿದೆ.
Advertisement