
ಅಮರಾವತಿ: 2024ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಆಂಧ್ರ ಪ್ರದೇಶದಲ್ಲಿ ದೇಶದಲ್ಲೇ ಅತಿದೊಡ್ಡ ಚುನಾವಣಾ ಅಕ್ರಮ ನಡೆದಿದೆ ಎಂದು ವೈಎಸ್‌ಆರ್‌ಸಿಪಿ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಬುಧವಾರ ಆರೋಪಿಸಿದ್ದಾರೆ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಬಗ್ಗೆ ಮೌನವಾಗಿದ್ದಾರೆ ಎಂದು ದೂರಿದ್ದಾರೆ.
ತಡೆಪಲ್ಲಿಯಲ್ಲಿರುವ ವೈಎಸ್‌ಆರ್‌ಸಿಪಿ ಕೇಂದ್ರ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಗನ್, ರಾಜ್ಯದಲ್ಲಿ ಚಲಾವಣೆಯಾದ ಮತಗಳಲ್ಲಿ ಸುಮಾರು 48 ಲಕ್ಷ ಮತಗಳು ಅಥವಾ ಶೇಕಡಾ 12.5 ರಷ್ಟು ಮತಗಳು ಅಕ್ರಮವಾಗಿ ಚಲಾವಣೆಯಾಗಿವೆ ಎಂದು ಆರೋಪಿಸಿದ್ದಾರೆ.
"ದುರದೃಷ್ಟವಶಾತ್, ರಾಹುಲ್ ಗಾಂಧಿ ಅವರು ಆಂಧ್ರಪ್ರದೇಶದ ಬಗ್ಗೆ ಏಕೆ ಮಾತನಾಡುತ್ತಿಲ್ಲ?. ಅವರು ಚಂದ್ರಬಾಬು ನಾಯ್ಡು ಅವರೊಂದಿಗೆ ಉತ್ತಮ ಸಂಬಂಧ ಹೊಂದಿರುವುದರಿಂದ ಅವರು ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ" ಎಂದು ಜಗನ್ ಹೇಳಿದ್ದಾರೆ.
ಆಂಧ್ರಪ್ರದೇಶದಲ್ಲಿ ನಡೆದ ಈ ಅಕ್ರಮ ದೇಶದಲ್ಲೇ ಅತಿದೊಡ್ಡ ಅಕ್ರಮ. ಮತದಾನ ಮುಗಿದು ಎಣಿಕೆ ಪ್ರಾರಂಭವಾಗುವ ಹೊತ್ತಿಗೆ, ಮತಗಳಲ್ಲಿ ಶೇಕಡಾವಾರು ವ್ಯತ್ಯಾಸ ಇಡೀ ದೇಶದಲ್ಲಿಯೇ ದೊಡ್ಡದಾಗಿದೆ ಎಂದು ಆಂಧ್ರ ಮಾಜಿ ಸಿಎಂ ಆರೋಪಿಸಿದ್ದಾರೆ.
ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಮಾಣಿಕ್ಕಂ ಟ್ಯಾಗೋರ್ ಅವರನ್ನು ಪ್ರಶ್ನಿಸಿದ ಜಗನ್, ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು "ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.
"ನಾಯ್ಡು, ಕಣ್ಣಿಗೆ ಕಾಣುವಂತಹ ಹಲವಾರು ಹಗರಣಗಳಲ್ಲಿ ಭಾಗಿಯಾಗಿದ್ದಾರೆ. ಆದರೆ ನಾಯ್ಡು, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ಕಾಂಗ್ರೆಸ್ ಹೈಕಮಾಂಡ್ ನಡುವೆ 'ಹಾಟ್‌ಲೈನ್' ಇರುವುದರಿಂದ ಟ್ಯಾಗೋರ್ ಈ ಬಗ್ಗೆ ಮಾತನಾಡುವುದಿಲ್ಲ" ಎಂದು ಜಗನ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Advertisement