
ನವದೆಹಲಿ: ರಾಜಕೀಯ ಪಕ್ಷಗಳು ತಾವು ಗೆದ್ದರೆ ಎಲೆಕ್ಟ್ರಾನಿಕ್ ಮತಯಂತ್ರಗಳು(ಇವಿಎಂಗಳು) ಸರಿ ಇವೆ ಎನ್ನುತ್ತಾರೆ. ಆದರೆ ಸೋತರೆ ಇವಿಎಂ ಇದ್ದಕ್ಕಿದ್ದಂತೆ ಸರಿ ಇರುವುದಿಲ್ಲ ಎಂದು ಚುನಾವಣಾ ಆಯೋಗ ಗುರುವಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(SIR) ಕುರಿತ ವಿಚಾರಣೆಯ ಸಂದರ್ಭದಲ್ಲಿ ಚುನಾವಣಾ ಆಯೋಗ, "ರಾಜಕೀಯ ಪಕ್ಷಗಳ ಹೋರಾಟದ ನಡುವೆ ಇಸಿ ಸಿಲುಕಿಕೊಂಡಿದೆ" ಎಂದು ಸುಪ್ರೀಂ ಕೋರ್ಟ್‌ಗೆ ಹೇಳಿದೆ.
ಜೂನ್ 24 ರಂದು ಬಿಹಾರದಲ್ಲಿ ಎಸ್ಐಆರ್ ನಡೆಸುತ್ತಿರುವ ಚುನಾವಣಾ ಆಯೋಗದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಪುನರಾರಂಭಿಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ಪೀಠದ ಮುಂದೆ ಚುನಾವಣಾ ಆಯೋಗ ತನ್ನ ವಾದ ಮಂಡಿಸಿತು.
ಚುನಾವಣಾ ಆಯೋಗ "ತೀವ್ರ ರಾಜಕೀಯ ದ್ವೇಷದ ವಾತಾವರಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೂ ಯಾವುದೇ ವಿವಾದಾತ್ಮಕ ನಿರ್ಧಾಗಳನ್ನು" ತೆಗೆದುಕೊಂಡಿಲ್ಲ. ಅವರು ಗೆದ್ದರೆ EVM ಒಳ್ಳೆಯದು, ಅವರು ಸೋತರೆ EVM ಕೆಟ್ಟದು ಎನ್ನುತ್ತಾರೆ ಎಂದು ಹೇಳಿದೆ.
ಬಿಹಾರದಲ್ಲಿ ಸುಮಾರು 6.5 ಕೋಟಿ ಜನ SIR ಗಾಗಿ ಯಾವುದೇ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.
ಈ ವೇಳೆ, ಮರಣ ಹೊಂದಿದ, ವಲಸೆ ಬಂದ ಅಥವಾ ಇತರ ಕ್ಷೇತ್ರಗಳಿಗೆ ಸ್ಥಳಾಂತರಗೊಂಡ ಜನರ ಹೆಸರುಗಳನ್ನು ನೀವು ಏಕೆ ಬಹಿರಂಗಪಡಿಸಲು ಸಾಧ್ಯವಿಲ್ಲ" ಎಂದು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗವನ್ನು ಪ್ರಶ್ನಿಸಿತು. ಅಲ್ಲದೆ ಬಿಹಾರ ಮತದಾರರ ಪಟ್ಟಿಯಿಂದ ತೆಗೆದುಹಾಕಲಾದ ಮತದಾರರ ಹೆಸರುಗಳನ್ನು ಹಂಚಿಕೊಳ್ಳುವಂತೆ ಸೂಚಿಸಿದೆ. ಇದಕ್ಕೆ ಚುನಾವಣಾ ಆಯೋಗ ಒಪ್ಪಿಗೆ ನೀಡಿದೆ.
Advertisement