
ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಪುನಃಸ್ಥಾಪಿಸಲು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಗುರುವಾರ ಈ ಸಂಬಂಧ ಕೇಂದ್ರದಿಂದ ಪ್ರತಿಕ್ರಿಯೆ ಕೇಳಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಬಿಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ಅವರ ಪೀಠ, ವಿಚಾರಣೆಯ ಸಮಯದಲ್ಲಿ ಪಹಲ್ಗಾಮ್ ಉಗ್ರ ದಾಳಿಯನ್ನು ಸಹ ಉಲ್ಲೇಖಿಸಿತು.
"ನೀವು ನೆಲದ ವಾಸ್ತವಗಳನ್ನು ಸಹ ಪರಿಗಣಿಸಬೇಕು - ಪಹಲ್ಗಾಮ್‌ನಲ್ಲಿ ಏನಾಯಿತು ಎಂಬುದನ್ನು ನೀವು ನಿರ್ಲಕ್ಷಿಸಲಾಗುವುದಿಲ್ಲ" ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಅರ್ಜಿಯನ್ನು ವಜಾಗೊಳಿಸುವಂತೆ ಕೋರಿದರು ಮತ್ತು ಹಿಂದೆಯೂ ಸಹ, ನ್ಯಾಯಾಲಯವು ಅಂತಹ ಅರ್ಜಿಗಳ ಮೇಲೆ ದಂಡ ವಿಧಿಸಿತ್ತು ಎಂದು ಹೇಳಿದರು.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಶಂಕರನಾರಾಯಣನ್ ಅವರು, ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸುವುದು ಸೇರಿದಂತೆ, ಈ ವಿಷಯಗಳ ಕುರಿತು ಸಂವಿಧಾನ ಪೀಠ ತೀರ್ಪು ನೀಡಿ 21 ತಿಂಗಳುಗಳಾಗಿವೆ ಎಂದು ಹೇಳಿದರು.
ಶಿಕ್ಷಣ ತಜ್ಞ ಜಹೂರ್ ಅಹ್ಮದ್ ಭಟ್ ಮತ್ತು ಸಾಮಾಜಿಕ-ರಾಜಕೀಯ ಕಾರ್ಯಕರ್ತ ಅಹ್ಮದ್ ಮಲಿಕ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಪುನಃಸ್ಥಾಪಿಸುವ ಕುರಿತು ಎಂಟು ವಾರಗಳಲ್ಲಿ ಉತ್ತರ ಸಲ್ಲಿಸುವಂತೆ ಸೂಚಿಸಿ, ವಿಚಾರಣೆಯನ್ನು ಮುಂದೂಡಿದೆ.
Advertisement