
ಕೋಲ್ಕತ್ತಾ: ಪಶ್ಚಿಮ ಬಂಗಾಳ ಸರ್ಕಾರ ಶುಕ್ರವಾರ ಕೋಲ್ಕತ್ತಾದ ರೆಡ್ ರೋಡ್‌ನಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಪರೇಡ್ ವೇಳೆ 39 ಶಾಲಾ ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ನಡೆದಿದೆ.
ತೀವ್ರವಾದ ಬಿಸಿಲಿನ ಶಾಖ ಮತ್ತು ಹೆಚ್ಚಿನ ಆರ್ದ್ರ ವಾತಾವರಣವೇ(high humid weather) ಇದಕ್ಕೆ ಕಾರಣವಾಗಿದೆ.
ಕೂಡಲೇ ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಸಮೀಪದ SSKM ಆಸ್ಪತ್ರೆಯ ತುರ್ತು ವಿಭಾಗಕ್ಕೆ ಕರೆದೊಯ್ಯಲಾಯಿತು. 39 ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಕರೆತರಲಾಗಿದ್ದು, ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ರೆಡ್ ರೋಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಸ್ಪತ್ರೆಗೆ ಭೇಟಿ ನೀಡಿದ್ದು, ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, ಎಲ್ಲಾ ಮಕ್ಕಳಿಗೂ ಬೆಳಗ್ಗೆ ತಿಂಡಿ ನೀಡಲಾಗಿತ್ತು. ಹಲವರಿಗೆ ಕಾರ್ಯಕ್ರಮ ಆಗೋವರೆಗೂ ಟೆನ್ಶನ್ ಇತ್ತು. ಅದಕ್ಕೆ ಹಸಿವಾಗಿತ್ತು. ಹಲವರಲ್ಲಿ ಡಿಹೈಡ್ರೇಶನ್ (ನಿರ್ಜಲೀಕರಣ) ಕಾಣಿಸಿತು. ಇದೊಂದು ಮಾನಸಿಕ ಪರಿಣಾಮವಾಗಿದೆ. ಒಬ್ಬ ಗೆಳೆಯನಿಗೆ ಕಾಯಿಲೆ ಬಿದ್ದದ್ದು ನೋಡಿ ಮತ್ತೊಬ್ಬ ಗೆಳೆಯನೂ ಅಸ್ವಸ್ಥನಾಗುತ್ತಾನೆ. ಈಗ ಎಲ್ಲರೂ ಕ್ಷೇಮವಾಗಿದ್ದಾರೆ. ಎಲ್ಲರಿಗೂ ನೀರು, ತಿಂಡಿ, ಸಿಹಿ ತಿಂಡಿ ಕೊಟ್ಟಿರುವುದಾಗಿ ಹೇಳಿದರು
ಕೆಲ ದಿನಗಳ ಹಿಂದೆ ಈ ಕಾರ್ಯಕ್ರಮದ ರಿಹರ್ಸಲ್ ವೇಳೆಯೂ ಕೆಲ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದರು. ಅವರಲ್ಲಿ ಕೆಲವರನ್ನು ಎಸ್‌ಎಸ್‌ಕೆಎಂ ಆಸ್ಪತ್ರೆಗೆ ಮತ್ತು ಉಳಿದವರನ್ನು ಕೊಲ್ಕತ್ತಾ ವೈದ್ಯಕೀಯ ಕಾಲೇಜಿಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿತ್ತು.
Advertisement