
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಕೆಂಪು ಕೋಟೆಯ ಮೇಲೆ 103 ನಿಮಿಷಗಳ ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ್ದು, ಇದು ಭಾರತದ ಇತಿಹಾಸದಲ್ಲಿ ಯಾವುದೇ ಪ್ರಧಾನಿ ಮಾಡಿದ ಅತಿ ದೀರ್ಘವಾದ ಭಾಷಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ..
ಕಳೆದ ವರ್ಷ 78 ನೇ ಸ್ವಾತಂತ್ರ್ಯೋತ್ಸವದ 98 ನಿಮಿಷಗಳ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಈ ಬಾರಿ ತಮ್ಮ ದಾಖಲೆಯನ್ನು ತಾವೇ ಮುರಿದಿದ್ದಾರೆ. 2024ಕ್ಕಿಂತ ಮೊದಲು 2016ರಲ್ಲಿ 96 ನಿಮಿಷಗಳ ಕಾಲ ಮಾಡಿದ್ದ ಭಾಷಣ ಅತಿ ದೀರ್ಘವಾದ ಭಾಷಣವಾಗಿತ್ತು. ಅತ್ಯಂತ ಕಡಿಮೆ ಸಮಯದ ಭಾಷಣವನ್ನು ಪ್ರಧಾನಿ ನರೇಂದ್ರ ಮೋದಿ 2017 ರಲ್ಲಿ ಮಾಡಿದ್ದರು. ಆಗ ಕೇವಲ 56 ನಿಮಿಷಗಳಲ್ಲೇ ಅವರ ಭಾಷಣ ಮುಕ್ತಾಯಗೊಂಡಿತ್ತು.
ಭಾರತದ 79 ನೇ ಸ್ವಾತಂತ್ರ್ಯೋತ್ಸವದಂದು, ಮೋದಿ ಕೆಂಪು ಕೋಟೆಯಿಂದ ಸತತ 12 ಭಾಷಣಗಳನ್ನು ಮಾಡುವ ಮೂಲಕ ಇಂದಿರಾ ಗಾಂಧಿಯವರ ದಾಖಲೆಯನ್ನು ಮುರಿದಿದ್ದಾರೆ. ಸತತ 17 ಸ್ವಾತಂತ್ರ್ಯೋತ್ಸವ ಭಾಷಣಗಳನ್ನು ಮಾಡಿದ ಜವಾಹರಲಾಲ್ ನೆಹರು ನಂತರ ಮೋದಿ ಎರಡನೇ ಸ್ಥಾನದಲ್ಲಿದ್ದಾರೆ. ಮೋದಿ 2014 ರಲ್ಲಿ ತಮ್ಮ ಮೊದಲ ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದರು, ಇದು 65 ನಿಮಿಷಗಳ ಕಾಲ ನಡೆಯಿತು.
2015 ರಲ್ಲಿ 88 ನಿಮಿಷಗಳ ಭಾಷಣ, 2018 ರಲ್ಲಿ, ಕೆಂಪು ಕೋಟೆಯ ಮೇಲೆ 83 ನಿಮಿಷಗಳ ಭಾಷಣ, ತರುವಾಯ, 2019 ರಲ್ಲಿ, ಮೋದಿ ಸುಮಾರು 92 ನಿಮಿಷಗಳ ಕಾಲ ಮಾತನಾಡಿದರು.
2020 ರಲ್ಲಿ ಮೋದಿಯವರ ಸ್ವಾತಂತ್ರ್ಯ ದಿನಾಚರಣೆಯ ಭಾಷಣ 90 ನಿಮಿಷಗಳ ಕಾಲ ನಡೆಯಿತು. 2021 ರಲ್ಲಿ ಅವರ ಸ್ವಾತಂತ್ರ್ಯ ದಿನಾಚರಣೆಯ ಭಾಷಣ 88 ನಿಮಿಷಗಳ ಕಾಲ ನಡೆಯಿತು ಮತ್ತು 2022 ರಲ್ಲಿ ಅವರು 74 ನಿಮಿಷಗಳ ಕಾಲ ಮಾತನಾಡಿದರು.
2023 ರಲ್ಲಿ, ಮೋದಿಯವರ ಭಾಷಣ 90 ನಿಮಿಷಗಳಾಗಿತ್ತು. ಮೋದಿಗಿಂತ ಮೊದಲು, 1947 ರಲ್ಲಿ ಜವಾಹರಲಾಲ್ ನೆಹರು ಮತ್ತು 1997 ರಲ್ಲಿ ಐಕೆ ಗುಜ್ರಾಲ್ ಕ್ರಮವಾಗಿ 72 ಮತ್ತು 71 ನಿಮಿಷಗಳ ಕಾಲ ದೀರ್ಘ ಭಾಷಣಗಳನ್ನು ಮಾಡಿದ್ದರು.
Advertisement