
ಬೀಜಿಂಗ್: ಭಾರತವು ಅಮೆರಿಕಕ್ಕೆ ರಫ್ತು ಮಾಡುವ ಸರಕುಗಳ ಮೇಲೆ ಶೇ. 50 ರಷ್ಟು ಸುಂಕವನ್ನು ಅಮೆರಿಕ ವಿಧಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ದಿಢೀರ್ ಚೀನಾಕ್ಕೆ ಭೇಟಿ ನೀಡಲು ಮುಂದಾಗಿದ್ದಾರೆ. ಚೀನಾ ತಿನ್‌ಜಿಯಾನ್ ನಗರದಲ್ಲಿ ಆ.31 ಮತ್ತು ಸೆ.1ರಂದು ವಾರ್ಷಿಕ ಶಾಂಘೈ ಶೃಂಗ ಸಭೆ (ಎಸ್‌ಸಿಒ) ನಡೆಯಲಿದ್ದು ಅದರಲ್ಲಿ ಮೋದಿ ಭಾಗಿಯಾಗುವ ಸಾಧ್ಯತೆ ಇದೆ.
ಈ ಮಧ್ಯೆ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಸೋಮವಾರ ಭಾರತಕ್ಕೆ ಆಗಮಿಸುತ್ತಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಟ್ರಂಪ್ ಸುಂಕ ಸಮರ ನಡುವೆ ಗಡಿ ಮಾತುಕತೆ ನೆಪದಲ್ಲಿ ಅವರು ಎರಡು ದಿನ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಇದು ಅಮೆರಿಕ ವಿರುದ್ಧ ಚೀನಾ ಒಗ್ಗಟ್ಟಿನ ಸೂಚನೆಯೇ ಎಂಬಂತಹ ಚರ್ಚೆಗಳು ನಡೆಯುತ್ತಿವೆ.
ಹೌದು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ಮುಂದಿನ ಸುತ್ತಿನ ಗಡಿ ಮಾತುಕತೆಗಾಗಿ ಚೀನಾ ವಿದೇಶಾಂಗ ಸಚಿವರು ಸೋಮವಾರ ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಶನಿವಾರ ಹೇಳಿದೆ.
ಭೇಟಿ ವೇಳೆ ಚೀನಾ-ಭಾರತದ ಗಡಿ ಸಮಸ್ಯೆ ಕುರಿತು ವಿಶೇಷ ಪ್ರತಿನಿಧಿಗಳ (SRs)ಸಭೆಯ 24 ನೇ ಸಭೆಯಲ್ಲಿ ವಾಂಗ್ ಭಾಗವಹಿಸಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ವಾಂಗ್ ಹಾಗೂ ಅಜಿತ್ ದೋವಲ್ ಅವರು ವಾಸ್ತವ ಗಡಿ ರೇಖೆಯ (LAC)3,488 ಕಿ.ಮೀ ನಷ್ಟು ಉದ್ದದ ಗಡಿ ಸಮಸ್ಯೆ ಬಗೆಹರಿಸುವ ಗುರಿ ಹೊಂದಿರುವ ವಿಶೇಷ ಪ್ರತಿನಿಧಿಗಳ ಸಭೆಯ ಮುಖ್ಯಸ್ಥರಾಗಿದ್ದಾರೆ.
ರಷ್ಯಾದ ಕಜಾನ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆ ವೇಳೆ ಭೇಟಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾದ ಅಧ್ಯಕ್ಷ ಕ್ಸಿ- ಜಿನ್ ಪಿಂಗ್, ಉಭಯ ದೇಶಗಳ ನಡುವಿನ ಗಡಿ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ನಿರ್ಧರಿಸಿದ್ದರು. ಇದಾದ ಕೆಲ ದಿನಗಳ ನಂತರ ಕಳೆದ ಡಿಸೆಂಬರ್‌ನಲ್ಲಿ ಚೀನಾಕ್ಕೆ ತೆರಳಿದ್ದ ದೋವಲ್ , ವಾಂಗ್ ಅವರೊಂದಿಗೆ 23 ನೇ ಸುತ್ತಿನ ಮಾತುಕತೆ ನಡೆಸಿದ್ದರು.
ಚೀನಾದ ತಿಯಾಜಿಯಾನ್ ನಗರದಲ್ಲಿ ಆಗಸ್ಟ್ 31ಸೆಪ್ಟೆಂಬರ್ 1 ರಂದು ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಗೆ ಮುಂಚಿತವಾಗಿ ವಾಂಗ್ ಭಾರತಕ್ಕೆ ಭೇಟಿ ನೀಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
Advertisement