
ನವದೆಹಲಿ: ಬಾಲಿವುಡ್ ಸಿನಿಮಾಗಳನ್ನು ಉಲ್ಲೇಖಿಸಿದ ಕಾಂಗ್ರೆಸ್, ಶನಿವಾರ "ಮತಗಳ್ಳತನ" ಆರೋಪದ ವಿರುದ್ಧ "ಲಾಪಾಟ ವೋಟ್" ಎಂಬ ಹೊಸ ವಿಡಿಯೋವನ್ನು ಬಿಡುಗಡೆ ಮಾಡುವ ಮೂಲಕ ಚುನಾವಣಾ ಆಯೋಗದ ವಿರುದ್ಧದ ತನ್ನ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದೆ.
X ನಲ್ಲಿ ವಿಡಿಯೋ ಪೋಸ್ಟ್ ಮಾಡಿದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, "'ಚೋರಿ ಚೋರಿ, ಚುಪ್ಕೆ ಚುಪ್ಕೆ' ಇನ್ನು ಮುಂದೆ ನಡೆಯಲ್ಲ. ಜನ ಈಗ ಎಚ್ಚೆತ್ತುಕೊಂಡಿದ್ದಾರೆ" ಎಂದು ಹೇಳಿದ್ದಾರೆ.
ಕಾಂಗ್ರೆಸ್ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿ "ನಿಮ್ಮ ಮತಗಳ್ಳತನ, ಹಕ್ಕುಗಳ ಕಳ್ಳತನ" ಎಂದು ಹೇಳಿದೆ.
"ಒಟ್ಟಾಗಿ ಮತಗಳ್ಳತನದ ವಿರುದ್ಧ ನಮ್ಮ ಧ್ವನಿ ಎತ್ತೋಣ ಮತ್ತು ನಮ್ಮ ಹಕ್ಕುಗಳನ್ನು ಉಳಿಸೋಣ" ಎಂದು ಕಾಂಗ್ರೆಸ್ ಕರೆ ನೀಡಿದೆ.
ವಿಡಿಯೋದಲ್ಲಿ, ಒಬ್ಬ ವ್ಯಕ್ತಿ ಪೊಲೀಸ್ ಠಾಣೆಯಲ್ಲಿ ತನ್ನ "ಮತಗಳ್ಳತನವಾಗಿದೆ" ಎಂದು ಬೇಡಿಕೊಳ್ಳುತ್ತಿರುವುದನ್ನು ಮತ್ತು ಅಲ್ಲಿನ ಅಧಿಕಾರಿಗಳಿಗೆ "ಲಕ್ಷಾಂತರ ಮತಗಳನ್ನು ಕಳ್ಳತನ ಮಾಡಲಾಗುತ್ತಿದೆ" ಎಂದು ಹೇಳುತ್ತಿರುವುದನ್ನು ಕಾಣಬಹುದು. ಈ ವೇಳೆ ಪೊಲೀಸ್ ಸಿಬ್ಬಂದಿ ತಮ್ಮ ಮತವನ್ನು ಸಹ "ಕದ್ದಿದ್ದಾರೆಯೇ" ಎಂದು ಆಶ್ಚರ್ಯ ಪಡುತ್ತಿದ್ದಾರೆ.
ಒಂದು ನಿಮಿಷದ ವಿಡಿಯೋಗೆ 'ಲಾಪಾಟ ವೋಟ್' ಎಂದು ಹೆಸರಿಸಲಾಗಿದ್ದು, 'ಲೇಡೀಸ್' ಅನ್ನು ತೆಗೆದು ಹಾಕಲಾಗಿದೆ. ಇದು ಕಿರಣ್ ರಾವ್ ನಿರ್ದೇಶನದ 'ಲಾಪಾಟ ಲೇಡೀಸ್' ಚಿತ್ರವನ್ನು ಉಲ್ಲೇಖಿಸುತ್ತದೆ.
ರಾಹುಲ್ ಗಾಂಧಿಯವರು ಆ ಒಂದು ನಿಮಿಷದ ವಿಡಿಯೋವನ್ನು ಹಂಚಿಕೊಂಡಿದ್ದು, "ಆಪ್ಕೆ ವೋಟ್ ಕಿ ಚೋರಿ ಆಪ್ಕೆ ಅಧಿಕಾರ್ ಕಿ ಚೋರಿ, ಆಪ್ಕಿ ಪೆಹಚಾನ್ ಕಿ ಚೋರಿ ಹೈ ಎಂದು ಹೇಳಿದ್ದಾರೆ.
Advertisement