
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ(ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಸೋಮವಾರ ತೀವ್ರ ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್, ಮೊದಲು ಚುನಾವಣಾ ಆಯೋಗವು ತನ್ನ ಮತದಾರರ ಪಟ್ಟಿ ಸ್ವಚ್ಛವಾಗಿದೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಲಿ. ನಂತರ ನಾವು ಅಸ್ತಿತ್ವದಲ್ಲಿರುವ ಪಟ್ಟಿಯಲ್ಲಿ ಅಕ್ರಮಗಳಿವೆ ಎಂದು ಅಫಿಡವಿಟ್ ಸಲ್ಲಿಸುತ್ತೇವೆ ಎಂದು ಹೇಳಿದೆ.
ಇಂದು ದೆಹಲಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು, ಜ್ಞಾನೇಶ್ ಕುಮಾರ್ "ಬಿಜೆಪಿ ವಕ್ತಾರ"ರಂತೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಿಇಸಿ, ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಸಹಿ ಮಾಡಿದ ಅಫಿಡವಿಟ್ ಸಲ್ಲಿಸುವಂತೆ ಏಳು ದಿನಗಳ ಗಡುವು ನೀಡಿದ ಒಂದು ದಿನದ ನಂತರ ಕಾಂಗ್ರೆಸ್ ಈ ಹೇಳಿಕೆ ನೀಡಿದೆ. ಇಲ್ಲದಿದ್ದರೆ ಅವರ ಆರೋಪಗಳು ಆಧಾರರಹಿತ ಮತ್ತು ಅಮಾನ್ಯವೆಂದು ಪರಿಗಣಿಸಲಾಗುತ್ತದೆ ಎಂದು ಸಿಇಸಿ ಹೇಳಿದೆ.
ಮತದಾರರ ಅಧಿಕಾರ ಯಾತ್ರೆಯ ಸಂದರ್ಭದಲ್ಲಿ ಪಕ್ಷದ ನಾಯಕ ಕನ್ಹಯ್ಯ ಕುಮಾರ್ ಅವರೊಂದಿಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ, "ಈ ಯಾತ್ರೆ ಪ್ರಾರಂಭವಾಗುತ್ತಿದ್ದಂತೆ, ಜ್ಞಾನೇಶ್ ಕುಮಾರ್ ಪತ್ರಿಕಾಗೋಷ್ಠಿ ಮಾಡಬೇಕಾಯಿತು. ಮುಖ್ಯ ಚುನಾವಣಾ ಆಯುಕ್ತರು ಇದ್ದಾರೆ ಎಂದು ನಮಗೆ ತಿಳಿದುಬಂದಿತು" ಎಂದರು.
"ಮೊದಲು, ಅನುರಾಗ್ ಠಾಕೂರ್, ಸಂಬಿತ್ ಪಾತ್ರ ಅಥವಾ ಇತರ ವ್ಯಕ್ತಿಯೊಬ್ಬರು ಕಾಮೆಂಟ್‌ಗಳನ್ನು ಮಾಡುತ್ತಾರೆ ಎಂದು ನಾವು ಭಾವಿಸುತ್ತಿದ್ದೆವು. ಆದರೆ ಅಂತಿಮವಾಗಿ ನಾವು ಸಿಇಸಿಯನ್ನು ನೋಡಿದ್ದೇವೆ" ಎಂದು ಖೇರಾ ಹೇಳಿದ್ದಾರೆ.
ಬಿಜೆಪಿ "ವೋಟ್ ಚೋರಿ" ಮಾಡಲು ಮತ್ತು "ಸಂವಿಧಾನವನ್ನು ಕದಿಯಲು" ಬಯಸುತ್ತದೆ ಎಂದು ಕನ್ಹಯ್ಯಾ ಕುಮಾರ್ ಆರೋಪಿಸಿದರು.
ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ, ಸಮೀಕ್ಷೆಗಳು ಕಾಂಗ್ರೆಸ್ ಸರ್ಕಾರ ರಚನೆಯಾಗುತ್ತದೆ ಎಂದು ಸೂಚಿಸಿದ್ದವು. ಆದರೆ ಇದಕ್ಕೆ ವಿರುದ್ಧವಾಗಿ ಫಲಿತಾಂಶ ಬಂದಿತು ಎಂದು ಕನ್ಹಯ್ಯಾ ಕುಮಾರ್ ಹೇಳಿದರು.
Advertisement