
ನವದೆಹಲಿ: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ISS)ಕ್ಕೆ ಪ್ರಯಾಣಿಸಿದ ಮೊದಲ ಭಾರತೀಯ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು.
ಜೂನ್ 25 ರಿಂದ ಜುಲೈ 15 ರವರೆಗೆ ಐಎಸ್‌ಎಸ್‌ಗೆ ಆಕ್ಸಿಯಮ್ -4 ವಾಣಿಜ್ಯ ಕಾರ್ಯಾಚರಣೆಯ ಭಾಗವಾಗಿದ್ದ ಶುಕ್ಲಾ ಅವರು ಇಂದು ಲೋಕ ಕಲ್ಯಾಣ್ ಮಾರ್ಗದಲ್ಲಿರುವ ಪ್ರಧಾನಿ ನಿವಾಸದಲ್ಲಿ ಮೋದಿ ಅವರನ್ನು ಭೇಟಿಯಾದರು. ಈ ವೇಳೆ ಅವರು ತಮ್ಮೊಂದಿಗೆ ಬಾಹ್ಯಾಕಾಶಕ್ಕೆ ಕೊಂಡೊಯ್ದ ತ್ರಿವರ್ಣ ಧ್ವಜವನ್ನು ಮೋದಿಗೆ ಉಡುಗೊರೆಯಾಗಿ ನೀಡಿದರು.
ಇಸ್ರೋ ಗಗನಯಾತ್ರಿಯ ಜಾಕೆಟ್ ಧರಿಸಿದ್ದ ಶುಕ್ಲಾ ಅವರನ್ನು ಪ್ರಧಾನಿ ಮೋದಿ ಬೆಚ್ಚಗಿನ ಅಪ್ಪುಗೆಯೊಂದಿಗೆ ಸ್ವಾಗತಿಸಿದರು.
ಶುಭಾಂಶು ಶುಕ್ಲಾ ಅವರು ಪ್ರಧಾನಿ ಮೋದಿಗೆ ಆಕ್ಸಿಯಮ್ -4 ಕಾರ್ಯಾಚರಣೆಯ ಮಿಷನ್ ಪ್ಯಾಚ್ ಅನ್ನು ಸಹ ಉಡುಗೊರೆಯಾಗಿ ನೀಡಿದರು. ಹಾಗೇ, ಬಾಹ್ಯಾಕಾಶ ನಿಲ್ದಾಣದಿಂದ ಸೆರೆಹಿಡಿಯಲಾದ ಭೂಮಿಯ ವಿಸ್ಮಯಕಾರಿ ಫೋಟೋಗಳನ್ನು ಹಂಚಿಕೊಂಡರು.
ಆಕ್ಸಿಯಮ್ -4 ಕಾರ್ಯಾಚರಣೆಯಲ್ಲಿ ಶುಭಾಂಶು ಶುಕ್ಲಾ ಅವರ ಭಾಗವಹಿಸುವಿಕೆ ಭಾರತಕ್ಕೆ ಒಂದು ಮೈಲಿಗಲ್ಲು. ಜೂನ್ 25ರಂದು ಫ್ಲೋರಿಡಾದಿಂದ ಉಡಾವಣೆಯಾದ ನಂತರ ಈ ಮಿಷನ್ ಜೂನ್ 26ರಂದು ISS ತಲುಪಿತು. ಶುಭಾಂಶು ಶುಕ್ಲಾ ಅವರು ಜುಲೈ 15ರಂದು ಭೂಮಿಗೆ ಮರಳಿದ್ದರು.
Advertisement