
ಕೊಚ್ಚಿ: ಕೇರಳದ ಮೂವರು ಸಂಸದರು ಸೇರಿದಂತೆ 190 ಜನರನ್ನು ಹೊತ್ತ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಭಾನುವಾರ ತಡರಾತ್ರಿ ದಿಢೀರ್ ರದ್ದಾಗಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿತ್ತು. ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಎಂಜಿನ್‌ನಿಂದ ಅಸಾಮಾನ್ಯ ಕಂಪನ ಪತ್ತೆಯಾದ ನಂತರ ಟೇಕ್ ಆಫ್ ಅನ್ನು ರದ್ದುಗೊಳಿಸಲಾಗಿತ್ತು.
185 ಪ್ರಯಾಣಿಕರು ಮತ್ತು ಐದು ಸಿಬ್ಬಂದಿಯನ್ನು ಹೊಂದಿದ್ದ ವಿಮಾನ AI 504 ರಾತ್ರಿ 10:40 ಕ್ಕೆ ತನ್ನ ಟೇಕ್-ಆಫ್ ರೋಲ್ ಅನ್ನು ಪ್ರಾರಂಭಿಸಿದಾಗ ಪೈಲಟ್ ಬಲವಾದ ಕಂಪನವನ್ನು ಗ್ರಹಿಸಿ ತಕ್ಷಣವೇ ಟೇಕ್ ಆಫ್ ರದ್ದುಗೊಳಿಸಿದರು ಎಂದು ವರದಿಯಾಗಿದೆ.
ಸಂಸತ್ ಅಧಿವೇಶನದಲ್ಲಿ ಭಾಗವಹಿಸಲು ದೆಹಲಿಗೆ ಪ್ರಯಾಣಿಸುತ್ತಿದ್ದ ಕಾಂಗ್ರೆಸ್ ಸಂಸದರಾದ ಹೈಬಿ ಈಡನ್, ಜೆಬಿ ಮಾಥರ್ ಮತ್ತು ಆಂಟೊ ಆಂಟನಿ ಅವರು ಸಹ ಈ ವಿಮಾನದಲ್ಲಿದ್ದರು.
“AI 504 ವಿಮಾನದಲ್ಲಿ ಏನೋ ಆಗುತ್ತಿದೆ... ವಿಮಾನವು ರನ್‌ವೇಯಲ್ಲಿ ಸ್ಕಿಡ್ ಆದಂತೆ ಭಾಸವಾಯಿತು... ಮತ್ತು ಇನ್ನೂ ಟೇಕ್ ಆಫ್ ಆಗಿಲ್ಲ.” ಎಂದು ಹೈಬಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ. ಅಲ್ಲದೆ ವಿಮಾನದಲ್ಲಿದ್ದ ಅವರ ಪತ್ನಿ ಅನ್ನಾ ಲಿಂಡಾ ಈಡನ್ ಅವರು, ಈ ಅನುಭವವು "ಬಹುತೇಕ ಬಲವಾದ ಬ್ರೇಕಿಂಗ್ ಕ್ರಿಯೆಯಂತೆ, ಹಠಾತ್ ಕಂಪನ" ದಂತೆ ಭಾಸವಾಯಿತು ಎಂದು ಹೇಳಿದ್ದಾರೆ.
ವಿಮಾನ ನಿಲ್ದಾಣದ ಅಧಿಕಾರಿಗಳು, ಪ್ರಯಾಣಿಕರನ್ನು ಕೆಳಗಿಳಿಸಿ, ನಂತರ ಸೋಮವಾರ ಬೆಳಗಿನ ಜಾವ 2.45 ಕ್ಕೆ 162 ಪ್ರಯಾಣಿಕರೊಂದಿಗೆ ಹೊರಟ ಪರ್ಯಾಯ ವಿಮಾನದಲ್ಲಿ ಈ ಪ್ರಯಾಣಿಕರಿಗೆ ಸ್ಥಳಾವಕಾಶ ಕಲ್ಪಿಸಲಾಗಿದೆ.
ಈ ಘಟನೆಯನ್ನು ಖಚಿತಪಡಿಸಿದ ಏರ್ ಇಂಡಿಯಾ, ಟೇಕ್-ಆಫ್ ರೋಲ್ ಸಮಯದಲ್ಲಿ ಅಸಾಮಾನ್ಯ ಶಬ್ದ ಕೇಳಿಬಂದ ನಂತರ ಕಾಕ್‌ಪಿಟ್ ಸಿಬ್ಬಂದಿ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಿದರು ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಹೇಳಿದೆ.
"ವಿಮಾನವನ್ನು ತಪಾಸಣೆಗಾಗಿ ಹಿಂತಿರುಗಿಸಲಾಯಿತು ಮತ್ತು ಪರ್ಯಾಯ ವಿಮಾನವನ್ನು ನಿಯೋಜಿಸಲಾಯಿತು. ಕೊಚ್ಚಿಯಲ್ಲಿರುವ ನಮ್ಮ ತಂಡ, ಪ್ರಯಾಣಿಕರಿಗೆ ತಕ್ಷಣವೇ ಸಹಾಯ ಮಾಡಿದರು" ಎಂದು ಏರ್‌ಲೈನ್ ಪ್ರಕಟಣೆಯಲ್ಲಿ ತಿಳಿಸಿದೆ.
Advertisement