
ಡೆಹ್ರಾಡೂನ್: ತೀವ್ರ ಪೈಪೋಟಿಯಿಂದ ಕೂಡಿದ್ದ ನೈನಿತಾಲ್ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನವನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಕೇವಲ ಒಂದು ಮತದ ಅಂತರದಿಂದ ಗೆದ್ದುಕೊಂಡಿದ್ದು, ರಾಜಕೀಯ ಹೈಡ್ರಾಮಾ ಮತ್ತು ಅಪಹರಣ ಆರೋಪಗಳಿಗೆ ತೆರೆ ಬಿದ್ದಿದೆ.
ಬಿಜೆಪಿಯ ದೀಪಾ ದರ್ಮವಾಲ್ ಅವರನ್ನು ಅಧ್ಯಕ್ಷೆಯಾಗಿ ಹಾಗೂ ಪಕ್ಷದ ಸಹೋದ್ಯೋಗಿ ದೇವಕಿ ಬಿಶ್ಟ್ ಅವರನ್ನು ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾ ಕಚೇರಿಯ ಪ್ರಕಾರ, ಅರ್ಹ 27 ಸದಸ್ಯರಲ್ಲಿ, ಕೇವಲ 22 ಮಂದಿ ಮಾತ್ರ ಮತ ಚಲಾಯಿಸಿದರು. ಶ್ರೀಮತಿ ದರ್ಮವಾಲ್ ತಮ್ಮ ಕಾಂಗ್ರೆಸ್ ಪ್ರತಿಸ್ಪರ್ಧಿ ಪುಷ್ಪಾ ನೇಗಿ ವಿರುದ್ಧ 11 ಮತಗಳನ್ನು ಪಡೆದರೆ, ನೇಗಿ 10 ಮತ ಗಳಿಸಿದರು. ಒಂದು ಮತವನ್ನು ಅಮಾನ್ಯವೆಂದು ಘೋಷಿಸಲಾಯಿತು. ಶ್ರೀಮತಿ ದರ್ಮವಾಲ್ ಅವರು ಒಂದು ಮತದಿಂದ ಗೆಲುವು ಸಾಧಿಸಿದರು.
ಆದಾಗ್ಯೂ, ಕಾಂಗ್ರೆಸ್, ಐದು ಜಿಲ್ಲಾ ಪಂಚಾಯತ್ ಸದಸ್ಯರನ್ನು ಮತದಾನ ಮಾಡದಂತೆ ತಡೆಯಲು "ಅಪಹರಿಸಲಾಗಿದೆ" ಎಂದು ಆರೋಪಿಸಿದೆ.
"ನಮ್ಮ ಸದಸ್ಯರನ್ನು ಮತದಾನದಲ್ಲಿ ಭಾಗವಹಿಸದಂತೆ ತಡೆಯಲು ಅಪಹರಿಸಲಾಗಿದೆ" ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದು, ಈ ಸಂಬಂಧ ಕಾನೂನು ಹೋರಾಟ ನಡೆಯುತ್ತಿರುವುದರಿಂದ ಹೆಸರು ಬಹಿರಂಗಪಡಿಸುವುದಿಲ್ಲ ಎಂದಿದ್ದಾರೆ.
ಚುನಾವಣೆಯಲ್ಲಿ ಕಾನೂನು ಬಾಹಿರ ಕೃತ್ಯಗಳ ಕುರಿತು ಕಾಂಗ್ರೆಸ್ ನಾಯಕರು ನೈನಿತಾಲ್ ಹೈಕೋರ್ಟ್ ಮೆಟ್ಟಿಲೇರಿದ್ದು, ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ.
Advertisement