
ಜೈಪುರ: ರಾಜಸ್ಥಾನದ ಮಣಿಕಾ ವಿಶ್ವಕರ್ಮ 2025 ರ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ, ಮುಂದಿನ ನವೆಂಬರ್ 21ರಂದು ಥೈಲ್ಯಾಂಡ್‌ನಲ್ಲಿ ನಡೆಯಲಿರುವ 74 ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.
ಶ್ರೀ ಗಂಗಾನಗರದ ಮಣಿಕಾ ಈ ಗೆಲುವನ್ನು ರಾಜಸ್ಥಾನ ಮತ್ತು ರಾಷ್ಟ್ರಕ್ಕೆ ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದ್ದಾರೆ. "ಈ ಸಾಧನೆಯು ಸಣ್ಣ ಪಟ್ಟಣಗಳಿಂದಲೂ ಕನಸುಗಳು ಮೂಡಿ ಎತ್ತರಕ್ಕೆ ಹಾರಬಲ್ಲದು ಎಂಬುದನ್ನು ಸಾಬೀತುಪಡಿಸುತ್ತದೆ" ಎಂದು ಅವರು ತಮ್ಮ ಗೆಲುವಿನ ನಂತರ ಜೈಪುರದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು.
ತಮ್ಮ ಪಯಣದ ಅನುಭವ ಹಂಚಿಕೊಂಡ ಮಣಿಕಾ, ಬ್ಯೂಟಿ ಪೇಜೆಂಟ್ ಸಿದ್ಧತೆಗೆ ದೆಹಲಿಗೆ ತೆರಳುವ ಮೊದಲು ತಮ್ಮ ತವರು ಗಂಗಾನಗರದಿಂದ ಆರಂಭಿಸಿದ್ದನ್ನು ಹೇಳಿಕೊಂಡರು. "ನಾವು ನಮ್ಮಲ್ಲಿ ಆತ್ಮವಿಶ್ವಾಸ ಮತ್ತು ಧೈರ್ಯವನ್ನು ತುಂಬಬೇಕು.
ನನ್ನ ಯಶಸ್ಸಿನಲ್ಲಿ ಪ್ರತಿಯೊಬ್ಬರೂ ದೊಡ್ಡ ಪಾತ್ರವನ್ನು ಹೊಂದಿದ್ದಾರೆ. ನನ್ನನ್ನು ಬೆಂಬಲಿಸಿದ ಮತ್ತು ನನ್ನನ್ನು ಇದಕ್ಕೆ ಸಮರ್ಥರನ್ನಾಗಿ ಮಾಡಿದ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ ಎಂದು ಅವರು ಹೇಳಿದರು. ಸ್ಪರ್ಧೆಯು ಕೇವಲ ಒಂದು ವೇದಿಕೆಯಲ್ಲ, ಪಾತ್ರವನ್ನು ನಿರ್ಮಿಸುವ ಜಗತ್ತು ಎಂದು ಅವರು ಹೇಳಿದರು.
ಅಂತಿಮ ಸ್ಪರ್ಧೆಯಲ್ಲಿ, ತಾನ್ಯಾ ಶರ್ಮಾ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದರು. ಮಿಸ್ ಯೂನಿವರ್ಸ್ ಇಂಡಿಯಾದ ಮಾಲೀಕ ನಿಖಿಲ್ ಆನಂದ್, ನಟಿ ಮತ್ತು ಮಿಸ್ ಯೂನಿವರ್ಸ್ ಇಂಡಿಯಾ 2015 ಉರ್ವಶಿ ರೌಟೇಲಾ ಮತ್ತು ನಿರ್ದೇಶಕಿ ಫರ್ಹಾದ್ ಸಂಜಿ ತೀರ್ಪುಗಾರರ ಸಮಿತಿಯಲ್ಲಿದ್ದರು. ಭಾರತದ ಕಲೆ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸಲು ಮತ್ತು ಉತ್ತೇಜಿಸಲು ಜೈಪುರವನ್ನು ಅಂತಿಮ ಸುತ್ತಿನ ಸ್ಪರ್ಧೆಗೆ ಆತಿಥೇಯ ನಗರವಾಗಿ ಆಯ್ಕೆ ಮಾಡಲಾಗಿದೆ ಎಂದು ಆನಂದ್ ಹೇಳಿದರು.
ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಬಾಲಿವುಡ್ ನಟಿ ಮತ್ತು ಮಾಜಿ ಮಿಸ್ ಯೂನಿವರ್ಸ್ ಇಂಡಿಯಾ ಊರ್ವಶಿ ರೌಟೇಲಾ ಕೂಡ ತೀರ್ಪುಗಾರರ ಸದಸ್ಯೆಯಾಗಿ ಹಾಜರಿದ್ದರು. ಸ್ಪರ್ಧೆ ತುಂಬಾ ಕಠಿಣವಾಗಿತ್ತು, ವಿಜೇತರು ನಮ್ಮೊಂದಿಗಿದ್ದಾರೆ. ಮಣಿಕಾ ಅವರು ಖಂಡಿತವಾಗಿಯೂ ಮಿಸ್ ಯೂನಿವರ್ಸ್‌ನಲ್ಲಿ ನಮ್ಮನ್ನು ಹೆಮ್ಮೆಪಡುವಂತೆ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ಹರಿಯಾಣ, ಒಡಿಶಾ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ, ಗುಜರಾತ್, ಉತ್ತರ ಪ್ರದೇಶ, ಪಂಜಾಬ್, ಮಹಾರಾಷ್ಟ್ರ, ಜಾರ್ಖಂಡ್ ಮತ್ತು ದೆಹಲಿ ಸೇರಿದಂತೆ ದೇಶಾದ್ಯಂತದ 48 ಸ್ಪರ್ಧಿಗಳು ಗ್ರ್ಯಾಂಡ್ ಫಿನಾಲೆಯಲ್ಲಿ ಪ್ರತಿಷ್ಠಿತ ಕಿರೀಟಕ್ಕಾಗಿ ಸ್ಪರ್ಧಿಸಿದರು.
ಈ ಗೆಲುವಿನೊಂದಿಗೆ, ಮಣಿಕಾ ವಿಶ್ವಕರ್ಮ ಈಗ ಮಿಸ್ ಯೂನಿವರ್ಸ್ 2025 ರಲ್ಲಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಧ್ವಜವನ್ನು ಹಾರಿಸಲು ಸಿದ್ಧರಾಗಲಿದ್ದಾರೆ.
Advertisement