
ಅಮರಾವತಿ: ಅರಣ್ಯ ಇಲಾಖೆಯ ಸರ್ಕಾರಿ ನೌಕರರೊಬ್ಬರ ಮೇಲೆ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ತನ್ನದೇ ಪಕ್ಷದ ಶಾಸಕ ಬಿ. ರಾಜಶೇಖರ್ ರೆಡ್ಡಿ ವಿರುದ್ಧ ಎಫ್ ಐಆರ್ ದಾಖಲಿಸಲು ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಗುರುವಾರ ಆದೇಶ ನೀಡಿದ್ದಾರೆ. ಈ ಸಂಬಂಧ ಶ್ರೀಶೈಲಂನ ಪಟ್ಟಣ ಠಾಣೆಯಲ್ಲಿ ಬುಧವಾರ ಎಫ್ ಐಆರ್ ದಾಖಲಾಗಿದೆ.
ರಾಜಶೇಖರ್ ರೆಡ್ಜಿ ಮತ್ತು ಅಶೋಕ್ ರವಾತ್ ಅವರು ಸ್ಥಳೀಯ ಜಿಲ್ಲಾ ಅರಣ್ಯಾಧಿಕಾರಿ ಕಾರು ಚಾಲಕ ಕರಿಮುಲ್ಲಾ (25) ಎಂಬರ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
ಶ್ರೀಶೈಲಂನ ಅರಣ್ಯ ಇಲಾಖೆ ನೌಕರನ ವಿರುದ್ಧ ಅನುಚಿತವಾಗಿ ವರ್ತಿಸಿದ TDP ಶಾಸಕ ಬುದ್ದ ರಾಜಶೇಖರ್ ರೆಡ್ಡಿ ವಿರುದ್ಧ ಎಫ್ ಐಆರ್ ದಾಖಲಿಸಲು ಚಂದ್ರಬಾಬು ನಾಯ್ಡು ಆದೇಶಿಸಿದ್ದಾರೆ ಎಂದು ಮೂಲಗಳು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿವೆ.
ಶ್ರೀಶೈಲಂ ಶಾಸಕ ರಾಜಶೇಖರ್ ರೆಡ್ಡಿ ಅವರು ಆಗಸ್ಟ್ 19 ರಂದು ರಾತ್ರಿ 9-30 ಸುಮಾರಿನಲ್ಲಿ ನಂದ್ಯಾಲ್ ಜಿಲ್ಲೆಯ ಶ್ರೀಶೈಲಂ ಗ್ರಾಮದ ಶಿಕಾರಾಂ ಚೆಕ್ ಪೋಸ್ಟ್ ನಲ್ಲಿ ಅರಣ್ಯ ಇಲಾಖೆ ನೌಕರನೊಂದಿಗೆ ಅನುಚಿತವಾಗಿ ವರ್ತಿಸಿರುವುದಾಗಿ ವರದಿಯಾಗಿದೆ. ಕರಿಮುಲ್ಲಾ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರೆಡ್ಡಿ ಮತ್ತು ರೌತ್ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಈ ಸಂಬಂಧ ಪೊಲೀಸರು BNS ಸೆಕ್ಷನ್ 115(2), 127(2), 351(2), ಮತ್ತು 132 3(5)ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ವಿಷಯವನ್ನು ಆಗಸ್ಟ್ 20 ರಂದು ಸಿಎಂ ಗಮನಕ್ಕೆ ತರಲಾಗಿದ್ದು, ತಕ್ಷಣವೇ ಎಫ್‌ಐಆರ್ ದಾಖಲಿಸುವಂತೆ ಆದೇಶಿಸಿದ್ದಾರೆ. ವಿಸ್ತೃತ ತನಿಖೆ ನಡೆಯುತ್ತಿದ್ದು, ಕಾನೂನಿನಡಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
Advertisement