
ನವದೆಹಲಿ: ಅಮೆರಿಕದ ಒತ್ತಡ ಹೆಚ್ಚುತ್ತಿರುವಂತೆಯೇ ಮಹತ್ವದ ರಾಜತಾಂತ್ರಿಕ ಬೆಳವಣಿಗೆಯೊಂದರಲ್ಲಿ ಗುರುವಾರ ಮಾಸ್ಕೋದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಭೇಟಿಯಾದರು. ಅಮೆರಿಕದ ಸುಂಕಾಸ್ತ್ರ ಮತ್ತು ರಷ್ಯಾದಿಂದ ತೈಲ ಖರೀದಿಸದಂತೆ ಎಚ್ಚರಿಕೆ ನಡುವೆ ರಷ್ಯಾ ಜೊತೆಗೆ ಒಪ್ಪಂದವನ್ನು ಮತ್ತಷ್ಟು ಬಲಪಡಿಸಿದರು.
ವರ್ಷಾಂತ್ಯಕ್ಕೆ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಭೇಟಿ ದಿನವನ್ನು ಅಂತಿಮಗೊಳಿಸುವ ಪ್ರಯತ್ನದ ಭಾಗವಾಗಿ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರೊಂದಿಗೆ ವ್ಯಾಪಕ ಮಾತುಕತೆ ನಡೆಸಿದ ಕೆಲ ತಾಸುಗಳ ಬಳಿಕ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ನಡೆಸಿದರು.
ದ್ವಿಪಕ್ಷೀಯ ವ್ಯಾಪಾರ ಬಲವರ್ಧನೆ ಮತ್ತು ಸಂಭಾವ್ಯ ಅಮೆರಿಕದ ಸುಂಕದಿಂದ ತಮ್ಮ ಇಂಧನ ಸಹಭಾಗಿತ್ವಕ್ಕೆ ಯಾವುದೇ ಧಕ್ಕೆಯಾಗದಂತೆ ರಕ್ಷಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಲಾವ್ರೊವ್ ಜೊತೆಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೈಶಂಕರ್ , ಇತ್ತೀಚಿನ ಯುಎಸ್ ಸುಂಕಗಳು ಮತ್ತು ರಷ್ಯಾದಿಂದ ಭಾರತದ ತೈಲ ಖರೀದಿ ಕುರಿತ ಟೀಕೆಗಳ ಹಿಂದಿನ ತಾರ್ಕಿಕತೆಯನ್ನು ಸಾರ್ವಜನಿಕವಾಗಿ ಪ್ರಶ್ನಿಸಿದರು.
"ನಾವು ರಷ್ಯಾದ ಅತಿದೊಡ್ಡ ತೈಲ ಖರೀದಿದಾರರಲ್ಲ, ಅದು ಚೀನಾ. ದ್ರವೀಕೃತ ನೈಸರ್ಗಿಕ ಅನಿಲದ (LNG) ಅತಿದೊಡ್ಡ ಖರೀದಿದಾರರಲ್ಲ, ಅದು ಯುರೋಪಿಯನ್ ಒಕ್ಕೂಟವಾಗಿದೆ. 2022 ರ ನಂತರ ರಷ್ಯಾದೊಂದಿಗೆ ಅತಿದೊಡ್ಡ ವ್ಯಾಪಾರ ಹೊಂದಿರುವ ದೇಶ ನಾವಲ್ಲ. ದಕ್ಷಿಣಕ್ಕೆ ಕೆಲವು ದೇಶಗಳಿವೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದರು.
ಭಾರತ ರಷ್ಯಾದಿಂದ ತೈಲ ಖರೀದಿಯನ್ನು ವಿರೋಧಿಸಿ ಇತ್ತೀಚಿಗೆ ಅಮೆರಿಕ ಶೇ. 50 ರಷ್ಟು ಸುಂಕ ವಿಧಿಸಿದೆ. ರಿಯಾಯಿತಿಯ ರಷ್ಯಾದ ಕಚ್ಚಾ ತೈಲವನ್ನು ಮರುಮಾರಾಟ ಮಾಡುವ ಮೂಲಕ ಭಾರತವು "ಲಾಭ ಗಳಿಸುತ್ತಿದೆ ಎಂದು ಅಮೆರಿಕ ಆರೋಪಿಸಿದೆ. ಈ ಆರೋಪವನ್ನು ಭಾರತ ತಳ್ಳಿಹಾಕಿದೆ.
ರಷ್ಯಾದಿಂದ ತೈಲ ಖರೀದಿಸುವುದು ಸೇರಿದಂತೆ ಜಾಗತಿಕ ಇಂಧನ ಮಾರುಕಟ್ಟೆಯನ್ನು ಸ್ಥಿರಗೊಳಿಸಲು ಈ ಹಿಂದೆ ಹೇಳಲಾದ ಎಲ್ಲಾ ಸೂಚನೆಗಳನ್ನು ಅನುಸರಿಸಿದ್ದೇವೆ. ಭಾರತ ಅಮೆರಿಕದಿಂದಲೂ ಗಮನಾರ್ಹ ಪ್ರಮಾಣದ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಎರಡನೆಯ ಮಹಾಯುದ್ಧದ ನಂತರ ಭಾರತ ಮತ್ತು ರಷ್ಯಾ ನಡುವಿನ ಸಂಬಂಧಗಳು ವಿಶ್ವದ ಪ್ರಮುಖ ಸಂಬಂಧಗಳಲ್ಲಿ ಸ್ಥಿರವಾಗಿವೆ ಎಂದು ನಾವು ನಂಬುತ್ತೇವೆ" ಎಂದು ಜೈಶಂಕರ್ ಹೇಳಿದರು.
"ಅಂತಾರಾಷ್ಟ್ರೀಯ ಸಂಬಂಧಗಳ ಹೊಸ ಬೆಳವಣಿಗೆ ನೋಡಿದಾಗ ನಮ್ಮ ಸಂಬಂಧಗಳಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ನೋಡುತ್ತೇವೆ ಎಂದು ಲಾವ್ರೊವ್ ಹೇಳಿದರು. ಭಾರತ ಮತ್ತು ರಷ್ಯಾ ದಶಕಗಳಿಂದ ನಿಕಟ ಸಂಬಂಧವನ್ನು ಉಳಿಸಿಕೊಂಡಿವೆ. ಭೌಗೋಳಿಕ ರಾಜಕೀಯತೆ, ನಾಯಕತ್ವದ ಸಂಪರ್ಕಗಳು ಮತ್ತು ಜನಪ್ರಿಯ ಭಾವನೆಗಳು" ಪಾಲುದಾರಿಕೆಯ ಆಧಾರ ಸ್ತಂಭಗಳಾಗಿವೆ ಎಂದು ಜೈಶಂಕರ್ ಉಲ್ಲೇಖಿಸಿದ್ದಾರೆ.
ವ್ಯಾಪಾರದಲ್ಲಿ ಕೊರತೆ, ಸುಂಕ ರಹಿತ ಅಡೆತಡೆಗಳು, ನಿಯಂತ್ರಕ ಅಡಚಣೆಗಳು ಮತ್ತು ರಷ್ಯಾದ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯರ ಕುರಿತ ವರದಿ ಸೇರಿದಂತೆ ಭಾರತದ ಅನೇಕ ಕಳವಳಗಳನ್ನು ಲಾವ್ರೊವ್ ಅವರೊಂದಿಗೆ ಜೈಶಂಕರ್ ಹಂಚಿಕೊಂಡರು.
Advertisement