
ನವದೆಹಲಿ: ಭಾರತವನ್ನು ಐಷಾರಾಮಿ ಫೆರಾರಿ ಕಾರಿಗೆ ಮತ್ತು ತನ್ನ ಸ್ವಂತ ದೇಶ ಪಾಕಿಸ್ತಾನವನ್ನು ಡಂಪ್ ಟ್ರಕ್ ನೊಂದಿಗೆ ಹೋಲಿಸಿರುವ ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ನ ವಿಲಕ್ಷಣವನ್ನು ಪ್ರಯತ್ನವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಲೇವಡಿ ಮಾಡಿದ್ದಾರೆ. ಈ ಹೇಳಿಕೆಯನ್ನು ಪಾಕಿಸ್ತಾನದ ವಿಫಲತೆಯ ತಪ್ಪೊಪ್ಪಿಗೆ ಎಂದಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಎರಡು ದೇಶಗಳು ಒಂದೇ ಅವಧಿಯಲ್ಲಿ ಸ್ವಾತಂತ್ರ್ಯ ಗಳಿಸಿದ್ದು, ಒಂದು ದೇಶವು ಕಠಿಣ ಪರಿಶ್ರಮ, ಸುಭದ್ರ ನೀತಿಗಳು ಮತ್ತು ದೂರದೃಷ್ಟಿಯಿಂದ ಫೆರಾರಿಯಂತಹ ಆರ್ಥಿಕತೆಯನ್ನು ನಿರ್ಮಿಸಿದರೆ, ಇನ್ನೊಂದು ದೇಶ ಡಂಪರ್ ಸ್ಥಿತಿಯಲ್ಲಿದೆ. ಅದು ಅವರ ಸ್ವಂತ ವೈಫಲ್ಯವಾಗಿದೆ ಎಂದು ಹೇಳಿದ್ದಾರೆ.
ಅಸಿಮ್ ಮುನೀರ್ ಅವರ ಈ ಹೇಳಿಕೆಯನ್ನು ತಪ್ಪೊಪ್ಪಿಗೆಯಂತೆ ನೋಡುತ್ತೇನೆ ಎಂದು ಹೇಳಿದರು.
ಈ ತಿಂಗಳ ಆರಂಭದಲ್ಲಿ ಅಸಿಮ್ ಮುನೀರ್ ನೀಡಿದ್ದ ಹೇಳಿಕೆಗಳಿಗೆ ರಾಜನಾಥ್ ಸಿಂಗ್ ಪ್ರತಿಕ್ರಿಯಿಸಿದರು. ಫ್ಲೋರಿಡಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಮುನೀರ್, ಭಾರತವು ಫೆರಾರಿಯಂತಹ ಹೆದ್ದಾರಿಯಲ್ಲಿ ಬರುತ್ತಿರುವ ಮರ್ಸಿಡಿಸ್ ನಂತೆ ಹೊಳೆಯುತ್ತಿದೆ. ಆದರೆ ನಾವು ಜಲ್ಲಿಕಲ್ಲುಗಳಿಂದ ತುಂಬಿದ ಡಂಪ್ ಟ್ರಕ್ ಆಗಿದ್ದೇವೆ. ಟ್ರಕ್ ಕಾರಿಗೆ ಡಿಕ್ಕಿ ಹೊಡೆದರೆ ಯಾರು ಸೋಲುತ್ತಾರೆ ಎಂಬ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್ ಆಗಿತ್ತು.
ಮುನೀರ್ ಅವರ ಹೇಳಿಕೆ ಪಾಕಿಸ್ತಾನದ ಮನಸ್ಥಿತಿಯೊಂದಿಗೆ ಆಳವಾದ ಸಮಸ್ಯೆಯನ್ನು ಪ್ರತಿಬಿಂಬಿಸುತ್ತದೆ. "ಪಾಕಿಸ್ತಾನದ ಸೇನೆಯ ಮುಖ್ಯಸ್ಥರು, ಗೊತ್ತಿದ್ದೋ ಅಥವಾ ತಿಳಿಯದೆಯೋ, ದರೋಡೆಕೋರ ಮನಸ್ಥಿತಿಯತ್ತ ಬೆರಳು ತೋರಿಸಿದ್ದಾರೆ. ಪಾಕಿಸ್ತಾನವು ಹುಟ್ಟಿನಿಂದಲೇ ಅದಕ್ಕೆ ಬಲಿಯಾಗಿದೆ. ನಾವು ಪಾಕಿಸ್ತಾನಿ ಸೇನೆಯ ಈ ಭ್ರಮೆಯನ್ನು ಮುರಿಯಬೇಕು ಎಂದು ರಾಜನಾಥ್ ಸಿಂಗ್ ಹೇಳಿದರು.
ಅಸೀಮ್ ಮನೀರ್ ಕಳೆದ ತಿಂಗಳು ಅಮೆರಿಕ ಭೇಟಿ ವೇಳೆಯಲ್ಲಿ ಪರಮಾಣು ಬೆದರಿಕೆ ಸೇರಿದಂತೆ ಅನೇಕ ವಿಚಾರಗಳನ್ನು ಗುರಿಯಾಗಿಟ್ಟುಕೊಂಡು ಭಾರತದ ವಿರುದ್ಧ ಸಾಕಷ್ಟು ವಿವಾದಾತ್ಮಕ ಹೇಳಿಕೆ ನೀಡಿದ್ದರು.
Advertisement