
ಭೋಪಾಲ್: ಹಿಂದೂ ಸ್ವಾಮೀಜಿ ಪ್ರೇಮಾನಂದ ಮಹಾರಾಜ್ ಅವರಿಗೆ ಮಧ್ಯಪ್ರದೇಶದ 26 ವರ್ಷದ ಮುಸ್ಲಿಂ ಯುವಕನೊಬ್ಬ ತನ್ನ ಒಂದು ಮೂತ್ರಪಿಂಡವನ್ನು ದಾನ ಮಾಡಲು ಮುಂದಾಗಿದ್ದಾರೆ.
ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ ಖ್ಯಾತ ಧಾರ್ಮಿಕ ಮತ್ತು ಆಧ್ಯಾತ್ಮಿಕ ಸ್ವಾಮೀಜಿ ಪ್ರೇಮಾನಂದ ಮಹಾರಾಜ್ ಅವರಿಗೆ ಆರಿಫ್ ಖಾನ್ ಚಿಸ್ತಿ ಎಂಬ ಯುವಕ ಪತ್ರ ಬರೆದಿದ್ದು, ತನ್ನ ಮೂತ್ರಪಿಂಡವನ್ನು ದಾನ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.
ಮಧ್ಯ ಪ್ರದೇಶದ ನರ್ಮದಾಪುರಂ ಜಿಲ್ಲೆಯ ಇಟಾರ್ಸಿ ಪಟ್ಟಣದ ನ್ಯಾಸ್ ಕಾಲೋನಿಯ ನಿವಾಸಿ ಚಿಶ್ತಿ ಅವರು ಜಿಲ್ಲಾಧಿಕಾರಿ ಸೋನಿಯಾ ಮೀನಾ ಅವರ ಕಚೇರಿಯ ಮೂಲಕ ಹಿಂದೂ ಸ್ವಾಮೀಜಿಗೆ ಪತ್ರವನ್ನು ಕಳುಹಿಸಿದ್ದಾರೆ.
ಆರಿಫ್ ತನ್ನ ಪತ್ರದಲ್ಲಿ ಪ್ರೇಮಾನಂದ ಮಹಾರಾಜ್ ಅವರನ್ನು ಹೊಗಳಿದ್ದಾರೆ. ಅವರನ್ನು ಭಾರತದಲ್ಲಿ ಹಿಂದೂ-ಮುಸ್ಲಿಂ ಸೌಹಾರ್ದತೆಯ ಸಂಕೇತ ಎಂದು ಕರೆದಿದ್ದಾರೆ. ದೇಶದ ಪ್ರಸ್ತುತ ದ್ವೇಷಮಯ ವಾತಾವರಣದಲ್ಲಿ ನಿಮ್ಮಂತಹ ಸಂತರ ಉಪಸ್ಥಿತಿ ಅಗತ್ಯವಾಗಿದೆ ಎಂದು ಹೇಳಲಾಗಿದೆ. "ನಾನು ಜೀವಂತವಾಗಿರಲಿ ಅಥವಾ ಇಲ್ಲದಿರಲಿ, ನಿಮ್ಮ ಜೀವನವು ಈ ಜಗತ್ತಿಗೆ ಬಹಳ ಅಮೂಲ್ಯವಾಗಿದೆ. ನಾನು ನನ್ನ ಒಂದು ಮೂತ್ರಪಿಂಡವನ್ನು ಸ್ವಯಂಪ್ರೇರಣೆಯಿಂದ ನಿಮಗೆ ನೀಡುತ್ತೇನೆ. ದಯವಿಟ್ಟು ನನ್ನ ಈ ಸಣ್ಣ ಉಡುಗೊರೆಯನ್ನು ಸ್ವೀಕರಿಸಿ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಪ್ರೇಮಾನಂದ ಮಹಾರಾಜ್ ಅವರ ಮಾತುಗಳು ದ್ವೇಷದ ವಿರುದ್ಧ ಪ್ರೀತಿಯನ್ನು ಮೂಡಿಸುತ್ತವೆ. ಅವರು ಸಮಾಜವನ್ನು ಕಟ್ಟುತ್ತಿದ್ದಾರೆ. ಸದ್ಯ ಅಗತ್ಯವಿರುವ ಪ್ರೀತಿಯನ್ನು ಬೋಧಿಸುತ್ತಿದ್ದಾರೆ. ಆನ್ ಲೈನ್ ನಲ್ಲಿ ಅವರ ಭಾಷಣ ಕೇಳಿ ಪ್ರಭಾವಿತನಾಗಿರುವುದಾಗಿ ಚಿಶ್ತಿ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಕಳೆದ ವರ್ಷ ವಿವಾಹವಾಗಿರುವ ಚಿಶ್ತಿ ಅವರಿಗೆ ಮೂವರು ಹಿರಿಯ ಸಹೋದರರು ಮತ್ತು ತಂದೆ ಇದ್ದಾರೆ. ಅವರು 12 ನೇ ತರಗತಿಯವರೆಗೆ ಓದಿದ್ದು, ಸಲಹೆಗಾರರಾಗಿ ಆನ್‌ಲೈನ್‌ನಲ್ಲಿ ಕೆಲಸ ಮಾಡುತ್ತಾರೆ. ಕೆಲವು ವರದಿಗಳ ಪ್ರಕಾರ, ಪ್ರೇಮಾನಂದ ಮಹಾರಾಜ್ ಅವರ ಎರಡೂ ಮೂತ್ರಪಿಂಡಗಳು ವಿಫಲವಾಗಿವೆ ಎನ್ನಲಾಗಿದೆ.
Advertisement