
ವಾರಣಾಸಿ: ಪಾರ್ಕಿಂಗ್ ಸ್ಥಳದ ವಿಚಾರಕ್ಕೆ ಆರಂಭವಾದ ಜಗಳ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ 48 ವರ್ಷದ ಶಿಕ್ಷಕನ ಕೊಲೆಯಲ್ಲಿ ಅಂತ್ಯವಾದ ಅಮಾನವೀಯ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ.
ಮೂವರು ವ್ಯಕ್ತಿಗಳು ಶಿಕ್ಷಕನನ್ನು ಹೊಡೆದು ಕೊಂದಿದ್ದು, ಎಲ್ಲಾ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಮೃತ ಪ್ರವೀಣ್ ಝಾ ಗುರುವಾರ ರಾತ್ರಿ ಪಾರ್ಕಿಂಗ್ ವಿಷಯವಾಗಿ ಆದರ್ಶ್ ಸಿಂಗ್ ಎಂಬುವವರೊಂದಿಗೆ ವಾಗ್ವಾದ ನಡೆಸಿದ್ದಾರೆ ಎಂದು ಪೊಲೀಸ್ ಉಪ ಆಯುಕ್ತ(ಅಪರಾಧ) ಸರವಣನ್ ಟಿ ಅವರು ಹೇಳಿದ್ದಾರೆ.
"ಜಗಳ ವಿಕೋಪಕ್ಕೆ ತಿರುಗಿ, ಆದರ್ಶ್ ಮತ್ತು ಆತನ ಇಬ್ಬರು ಸಹಚರರು ಪ್ರವೀಣ್ ಮೇಲೆ ಇಟ್ಟಿಗೆ ಮತ್ತು ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ" ಎಂದು ಅಧಿಕಾರಿ ತಿಳಿಸಿದ್ದಾರೆ.
ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶಿಕ್ಷಕ ಪ್ರವೀಣ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಮೃತ ಪ್ರವೀಣ್ ವಾರಣಾಸಿಯ ಪ್ರಮುಖ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿದ್ದರು.
ಕುಟುಂಬದ ದೂರಿನ ಆಧಾರದ ಮೇಲೆ ಕೊಲೆ ಪ್ರಕರಣ ದಾಖಲಿಸಲಾಗಿದೆ.
Advertisement