
ನವದೆಹಲಿ: ಮಹತ್ವಾಕಾಂಕ್ಷೆಯ 'ಪ್ರಾಜೆಕ್ಟ್ 75 ಇಂಡಿಯಾ' (P-75I) ಅಡಿಯಲ್ಲಿ ಜರ್ಮನಿಯಿಂದ ಆರು ಸುಧಾರಿತ ಜಲಾಂತರ್ಗಾಮಿ ನೌಕೆಗಳ ಸ್ವಾಧೀನಕ್ಕೆ ಔಪಚಾರಿಕ ಮಾತುಕತೆ ಪ್ರಾರಂಭಿಸಲು ರಕ್ಷಣಾ ಸಚಿವಾಲಯ ಮತ್ತು ಮಜಗಾನ್ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್ ಗೆ (MDL) ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಉನ್ನತ ರಕ್ಷಣಾ ಮತ್ತು ರಾಷ್ಟ್ರೀಯ ಭದ್ರತಾ ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ಸಭೆಯ ನಂತರ ಇದಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ ಎಂದು ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಭೆಯಲ್ಲಿ ಭಾರತದ ಜಲಾಂತರ್ಗಾಮಿ ನೌಕಾಪಡೆಯ ದೀರ್ಘಾವಧಿಯ ಮಾರ್ಗಸೂಚಿಯನ್ನು ಚರ್ಚಿಸಲಾಗಿದ್ದು, ರಕ್ಷಣಾ ಸಚಿವಾಲಯ, MDL ಮತ್ತು ಆಯ್ದ ಜರ್ಮನ್ ಪಾಲುದಾರರ ನಡುವಿನ ಸಂಧಾನ ಪ್ರಕ್ರಿಯೆಯು ಈ ತಿಂಗಳ ಅಂತ್ಯದ ವೇಳೆಗೆ ಪ್ರಾರಂಭವಾಗುವ ನಿರೀಕ್ಷೆಯಿದೆ.
'ಪ್ರಾಜೆಕ್ಟ್ 75 ಇಂಡಿಯಾ (P-75I)ಅಡಿಯಲ್ಲಿ ಏರ್ ಇಂಡಿಪೆಂಡೆಂಟ್ ಪ್ರೊಪಲ್ಷನ್ (AIP) ವ್ಯವಸ್ಥೆ ಹೊಂದಿರುವ ಮುಂದಿನ ಪೀಳಿಗೆಯ ಆರು ಸುಧಾರಿತ ಜಲಾಂತರ್ಗಾಮಿ ನೌಕೆ ಖರೀದಿಸುವ ಗುರಿಯನ್ನು ಭಾರತದ ನೌಕಪಡೆ ಹೊಂದಿದೆ. ಇದು ನೀರಿನೊಳಗೆ ಉಳಿಯುವ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸಲಿದ್ದು, ಆರು ಸುಧಾರಿತ ಜಲಾಂತರ್ಗಾಮಿ ನೌಕೆಗಳು ಸುಮಾರು ಆರು ವಾರಗಳ ಕಾಲ ಉಳಿಯಲು ಅವಕಾಶ ನೀಡುತ್ತದೆ.
ಒಪ್ಪಂದದ ಮಾತುಕತೆಗಳನ್ನು ಮುಕ್ತಾಯಗೊಳಿಸಲು ಆರರಿಂದ ಎಂಟು ತಿಂಗಳ ಕಾಲಾವಧಿಯನ್ನು ರಕ್ಷಣಾ ಸಚಿವಾಲಯ ಗುರಿಯಾಗಿ ಹೊಂದಿದೆ. ನಂತರ ಸರ್ಕಾರದ ಅಂತಿಮ ಅನುಮೋದನೆಯನ್ನು ಪಡೆಯಲಾಗುವುದು.
ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆಗಳ ವಿನ್ಯಾಸ ಮತ್ತು ತಯಾರಿಕೆಯಲ್ಲಿ ಸ್ವದೇಶಿ ಸಾಮರ್ಥ್ಯಗಳನ್ನು ಬೆಳೆಸುವುದು ಮತ್ತು ವಿದೇಶಿ ಪೂರೈಕೆದಾರರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಈ ಒಪ್ಪಂದದ ಪ್ರಮುಖ ಉದ್ದೇಶವಾಗಿದೆ. ಮುಂದಿನ ದಶಕದಲ್ಲಿ ಭಾರತೀಯ ನೌಕಾಪಡೆಯು ಸುಮಾರು 10 ಹಳೆಯದಾದ ಜಲಾಂತರ್ಗಾಮಿ ನೌಕೆಗಳನ್ನು ಬದಲಾಯಿಸುವ ನಿರೀಕ್ಷೆಯಿದೆ.
Advertisement