YouTuber ಎಲ್ವಿಶ್ ಯಾದವ್ ನಿವಾಸದ ಮೇಲೆ ಗುಂಡಿನ ದಾಳಿ: ಬೈಕ್ ಟ್ಯಾಕ್ಸಿ ಸವಾರನ ಬಂಧನ!
ಗುರುಗ್ರಾಮ: ಯೂಟ್ಯೂಬರ್ ಮತ್ತು ಬಿಗ್ ಬಾಸ್ ಒಟಿಟಿ ವಿಜೇತ ಎಲ್ವಿಶ್ ಯಾದವ್ ಅವರ ಮನೆಯ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಕ್-ಟ್ಯಾಕ್ಸಿ ಸೇವೆಯ ಸವಾರನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಆರೋಪಿಯನ್ನು ಫರಿದಾಬಾದ್‌ನ ಪಾರ್ವತಿಯಾ ಕಾಲೋನಿಯ ಜತಿನ್ (24) ಎಂದು ಗುರುತಿಸಲಾಗಿದೆ. ಈತ ಆಗಸ್ಟ್ 17 ರಂದು ಗುರುಗ್ರಾಮ್‌ನ ಸೆಕ್ಟರ್ 57 ರಲ್ಲಿ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ ನಡೆಸಲು ಬೈಕ್ ಒದಗಿಸಿದ್ದ ಎನ್ನಲಾಗಿದೆ.
ಫರಿದಾಬಾದ್‌ನಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಬಂಧನಕ್ಕೊಳಗಾದ ಎರಡನೇ ಆರೋಪಿಯಾಗಿದ್ದಾನೆ.
ವಿಚಾರಣೆ ವೇಳೆ ಜತಿನ್ ಕಳೆದ ಎರಡು ತಿಂಗಳಿನಿಂದ ಗುರುಗ್ರಾಮ್‌ನಲ್ಲಿ ಆ್ಯಪ್ ಆಧಾರಿತ ಸೇವೆಗಾಗಿ ಬೈಕ್‌ಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದುದನ್ನು ಬಹಿರಂಗಪಡಿಸಿದ್ದಾನೆ. ಕೆಲವು ಸಹಚರರ ಸಲಹೆಯ ಮೇರೆಗೆ ಎಲ್ವಿಶ್ ಯಾದವ್ ಮನೆ ಮೇಲೆ ಗುಂಡಿನ ದಾಳಿಯಲ್ಲಿ ತೊಡಗಿಸಿಕೊಂಡಿದ್ದು, ಅದಕ್ಕಾಗಿ ತನ್ನ ಬೈಕ್ ನೀಡಿದ್ದ. ಅದನ್ನು ವಶಕ್ಕೆ ಪಡೆದಿದ್ದೇವೆ ಎಂದು ಅಪರಾಧ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಯನ್ನು ಭಾನುವಾರ ನಗರದ ನ್ಯಾಯಾಲಯವೊಂದರಲ್ಲಿ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮುಂದಿನ ತನಿಖೆ ನಡೆಯುತ್ತಿದೆ ಎಂದು ಗುರುಗ್ರಾಮದ ಪೊಲೀಸ್ ವಕ್ತಾರರೊಬ್ಬರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ