
ನವದೆಹಲಿ: ಅಮೆರಿಕಾಗೆ ಆಮದಾಗುವ ಭಾರತದ ಉತ್ಪನ್ನಗಳಿಗೆ ಶೇ.50 ರಷ್ಟು ಸುಂಕ ವಿಧಿಸಿರುವುದು ಅಮೆರಿಕ- ಭಾರತದ ನಡುವಿನ ದ್ವಿಪಕ್ಷೀಯ ಸಂಬಂಧದ ಮೇಲೆ ತೀವ್ರವಾದ ಪರಿಣಾಮ ಉಂಟುಮಾಡುವಂತಿದೆ.
ಹೆಚ್ಚುವರಿ ಸುಂಕಗಳು ನಾಳೆಯಿಂದ ಜಾರಿಗೆ ಬರಲಿದ್ದು, ಅಧಿಕೃತವಾಗಿ ಜಾರಿಗೆ ಬರುವುದಕ್ಕೂ ಮುನ್ನ ಟ್ರಂಪ್ ಪ್ರಧಾನಿ ನರೇಂದ್ರ ಮೋದಿ ಜೊತೆ ದೂರವಾಣಿ ಸಂಭಾಷಣೆ ಮೂಲಕ ಮಾತುಕತೆ ನಡೆಸಲು ಸತತ 4 ಬಾರಿ ಪ್ರಯತ್ನಿಸಿದ್ದು ವಿಫಲವಾಗಿದೆ.
ಟ್ರಂಪ್ ದೂರವಾಣಿ ಕರೆ ಸ್ವೀಕರಿಸಲು ಮೋದಿ ನಿರಾಕರಿಸಿರುವುದನ್ನು ಉಲ್ಲೇಖಿಸಿ ಜರ್ಮನಿಯ ಪತ್ರಿಕೆಯೊಂದು ಪ್ರಕಟಿಸಿರುವ ವರದಿ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಫ್ರಾಂಕ್‌ಫರ್ಟರ್ ಆಲ್ಗೆಮೈನ್ ಈ ವರದಿ ಪ್ರಕಟಿಸಿದ್ದು, ಈ ಬೆಳವಣಿಗೆಯನ್ನು ಅಲ್ಲಿನ ಮಾಧ್ಯಮಗಳು ಪ್ರಧಾನಿ ಮೋದಿಯ ತೀವ್ರ ಕೋಪದ ಸಂಕೇತ ಎಂದು ವಿಶ್ಲೇಷಿಸಿವೆ. ಅಷ್ಟೇ ಅಲ್ಲದೇ ಇದು ಮೋದಿ ಅವರ ಎಚ್ಚರಿಕೆಯ ನಡೆಯೂ ಹೌದೆಂದು ಹೇಳಿವೆ.
ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಲು ಅಧ್ಯಕ್ಷ ಟ್ರಂಪ್ ಮಾಡಿದ ಪ್ರಯತ್ನಗಳು ಅವರ ಆಡಳಿತವು ಭಾರತಕ್ಕೆ 50% ಸುಂಕಗಳನ್ನು ವಿಧಿಸುವ ಹಿನ್ನೆಲೆಯಲ್ಲಿ ನಡೆದಿದೆ. ಈ ಸುಂಕ ಬ್ರೆಜಿಲ್ ಹೊರತುಪಡಿಸಿ ಬೇರೆ ಯಾವುದೇ ದೇಶಕ್ಕೆ ಹೋಲಿಸಿದರೆ ಅತಿ ಹೆಚ್ಚು ಪ್ರಮಾಣದ್ದಾಗಿದೆ.
25 ವರ್ಷಗಳಿಂದ ಬೆಳೆಸಿಕೊಂಡು ಬಂದ ಭಾರತ-ಅಮೆರಿಕಾ ಸಂಬಂಧಗಳು, ಟ್ರಂಪ್ ಭಾರತವನ್ನು ವ್ಯಾಪಾರ ಅಸಮತೋಲನ ಎಂದು ಗುರಿಯಾಗಿಸಿಕೊಂಡು ಮಾತನಾಡುವುದರೊಂದಿಗೆ ಬಿಕ್ಕಟ್ಟನ್ನು ಎದುರಿಸಿದವು. ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸಿದ್ದಕ್ಕಾಗಿ ಟ್ರಂಪ್ ಭಾರತಕ್ಕೆ ಹೆಚ್ಚುವರಿ ಸುಂಕಗಳನ್ನು ವಿಧಿಸಲು ಮುಂದಾಗಿದ್ದಾರೆ.
"ಇತ್ತೀಚಿನ ವಾರಗಳಲ್ಲಿ ಟ್ರಂಪ್ ಮೋದಿಗೆ ನಾಲ್ಕು ಬಾರಿ ಕರೆ ಮಾಡಲು ಪ್ರಯತ್ನಿಸಿದರು ಆದರೆ ಮೋದಿ ಕರೆಗಳನ್ನು ಸ್ವೀಕರಿಸಲು ನಿರಾಕರಿಸಿದರು ಎಂದು FAZ ಹೇಳಿದೆ" ಎಂದು ಬರ್ಲಿನ್ ಮೂಲದ ಗ್ಲೋಬಲ್ ಪಬ್ಲಿಕ್ ಪಾಲಿಸಿ ಇನ್‌ಸ್ಟಿಟ್ಯೂಟ್‌ನ ಸಹ-ಸಂಸ್ಥಾಪಕ ಮತ್ತು ನಿರ್ದೇಶಕ ಥಾರ್ಸ್ಟನ್ ಬೆನ್ನರ್ ಅವರು X ನಲ್ಲಿ ಪತ್ರಿಕೆ ವರದಿಯ ಪ್ರತಿಯನ್ನು ಹಂಚಿಕೊಂಡು ಪೋಸ್ಟ್ ಮಾಡಿದ್ದಾರೆ.
ಆಗಸ್ಟ್ 10 ರಂದು ಟ್ರಂಪ್ ಅವರ "ಡೆಡ್ ಎಕಾನಮಿ" ಹೇಳಿಕೆಯನ್ನು ಪರೋಕ್ಷವಾಗಿ ಟೀಕಿಸಿದ ಮೋದಿ, ಭಾರತ ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗುವತ್ತ ಸಾಗುತ್ತಿದೆ, ಭಾರತದ ಕೃಷಿ ಹಾಗೂ ಮೀನುಗಾರಿಕೆ ವಲಯ ಹಿತಾಸಕ್ತಿಯನ್ನು ರಕ್ಷಿಸಲು ತಾವು ಹಾಗೂ ತಮ್ಮ ಸರ್ಕಾರ ಯಾವುದೇ ಪರಿಸ್ಥಿತಿಯನ್ನು ಎದುರಿಸಲೂ ಸಿದ್ಧ ಎಂದು ಪ್ರತಿಪಾದಿಸಿದ್ದರು.
ಇದಷ್ಟೇ ಅಲ್ಲದೇ ಭಾರತವು ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದದ ಮಾತುಕತೆಯನ್ನು ರದ್ದುಗೊಳಿಸಿದೆ. ಅಮೆರಿಕದ ನಿಯೋಗವು ನವದೆಹಲಿಗೆ ಬರದಂತೆ ತಡೆಯಲಾಗಿದೆ.
Advertisement