
ರಾಜಸ್ಥಾನ: ಉದಯಪುರದಲ್ಲಿ 55 ವರ್ಷದ ಮಹಿಳೆಯೊಬ್ಬರು ಮಂಗಳವಾರ 17ನೇ ಮಗುವಿಗೆ ಜನ್ಮ ನೀಡಿದ್ದಾರೆ. ರೇಖಾ ಗಾಲ್ಬೆಲಿಯಾ ಎಂಬ ಮಹಿಳೆ ಈ ಹಿಂದೆ 16 ಮಕ್ಕಳಿಗೆ ಜನ್ಮ ನೀಡಿದ್ದರು. ಆದರೆ, ಆಕೆಯ ನಾಲ್ವರು ಪುತ್ರರು ಮತ್ತು ಒಬ್ಬ ಮಗಳು ಹುಟ್ಟಿದ ಕೂಡಲೇ ಮೃತಪಟ್ಟಿದ್ದಾರೆ. ಅವಳ ಉಳಿದಿರುವ ಮಕ್ಕಳಲ್ಲಿ, ಐವರು ಮದುವೆಯಾಗಿದ್ದು,ಮಕ್ಕಳು ಕೂಡಾ ಇದ್ದಾರೆ.
ಕುಟುಂಬದ ಸಂಕಷ್ಟ ಕುರಿತು ಮಾತನಾಡಿದ ಆಕೆಯ ಪುತ್ರಿ ಶಿಲಾ ಕಲ್ಬೆಲಿಯಾ, ನಾವೆಲ್ಲರೂ ಸಾಕಷ್ಟು ಕಷ್ಟಗಳನ್ನು ಎದುರಿಸುವಂತಾಗಿದೆ. ನಮ್ಮ ತಾಯಿಗೆ ತುಂಬಾ ಮಕ್ಕಳಿದ್ದಾರೆ ಎಂದು ಕೇಳಿ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ ಎಂದು ಹೇಳಿದರು.
ರೇಖಾ ಅವರ ಪತಿ ಕವ್ರಾ ಕಲ್ಬೆಲಿಯಾ ಮಾತನಾಡಿದ ಅವರು ಕುಟುಂಬದ ಆರ್ಥಿಕ ಸಂಕಷ್ಟಗಳನ್ನು ವಿವರಿಸಿದರು. ಸ್ವಂತ ಮನೆ ಇಲ್ಲದೇ ಜೀವನ ನಿರ್ವಹಣೆಗೆ ಪರದಾಡುತ್ತಿದ್ದೇವೆ. ಮಕ್ಕಳಿಗೆ ಆಹಾರಕ್ಕಾಗಿ ಲೇವಾದೇವಿಗಾರರಿಂದ ಶೇ. 20 ರಷ್ಟು ಬಡ್ಡಿಗೆ ಹಣವನ್ನು ಸಾಲ ಮಾಡಿದ್ದು, ಲಕ್ಷ ರೂ. ಮರುಪಾವತಿಸಿದ್ದೇನೆ, ಆದರೆ ಸಾಲದ ಬಡ್ಡಿಯನ್ನು ಇನ್ನೂ ಸಂಪೂರ್ಣವಾಗಿ ಪಾವತಿಸಿಲ್ಲ ಎಂದು ಅವರು ಹೇಳಿದರು.
ಗುಜರಿ ಅಂಗಡಿ ಮೂಲಕ ಬದುಕು ಸಾಗಿಸುತ್ತಿದ್ದು, ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. "ಪ್ರಧಾನಿ ಆವಾಸ್ ಯೋಜನೆಯಡಿ ಮನೆ ಮಂಜೂರಾದರೂ, ಭೂಮಿ ನಮ್ಮ ಹೆಸರಿನಲ್ಲಿಲ್ಲದ ಕಾರಣ ನಾವು ನಿರಾಶ್ರಿತರಾಗಿದ್ದೇವೆ. ಆಹಾರ, ಮದುವೆ ಅಥವಾ ಶಿಕ್ಷಣಕ್ಕೆ ಸಾಕಷ್ಟು ಹಣ ಇಲ್ಲ. ಈ ಸಮಸ್ಯೆಗಳು ಪ್ರತಿದಿನ ನಮ್ಮನ್ನು ಕಾಡುತ್ತಿವೆ" ಎಂದು ಕವ್ರಾ ಹೇಳಿದರು.
ಜಾಡೋಲ್ ಸಮುದಾಯ ಆರೋಗ್ಯ ಕೇಂದ್ರದ ಸ್ತ್ರೀರೋಗತಜ್ಞ ರೋಷನ್ ದರಂಗಿ, ರೇಖಾ ಅವರನ್ನು ದಾಖಲಿಸಿದಾಗ, ಇದು ಅವರ ನಾಲ್ಕನೇ ಮಗು ಎಂದು ಮನೆಯವರು ನಮಗೆ ಹೇಳಿದ್ದರು. ನಂತರ, ಇದು ಅವರ 17 ನೇ ಮಗು ಎಂದು ತಿಳಿದುಬಂದಿದೆ ಎಂದು ಅವರು ಹೇಳಿದರು.
Advertisement