
ಭೋಪಾಲ್: 2007ರಲ್ಲಿ, ಕರೀನಾ ಕಪೂರ್ ಮತ್ತು ಶಾಹಿದ್ ಕಪೂರ್ ಅಭಿನಯದ ಬಾಲಿವುಡ್ ಚಿತ್ರ 'ಜಬ್ ವಿ ಮೆಟ್' ಬಾಕ್ಸ್ ಆಫೀಸ್‌ನಲ್ಲಿ ಭಾರಿ ಸದ್ದು ಮಾಡಿತ್ತು.
'ಜಬ್ ವಿ ಮೆಟ್' ಚಿತ್ರ ಬಿಡುಗೆಯಾಗಿ 17 ವರ್ಷಗಳ ನಂತರ, 'ಮಿನಿ-ಮುಂಬೈ' ಇಂದೋರ್‌ನಲ್ಲಿ ನಿಜ ಜೀವನದಲ್ಲೂ 'ಜಬ್ ವಿ ಮೆಟ್' ಚಿತ್ರದಂತಹ ವಿಲಕ್ಷಣ ಘಟನೆ ವರದಿಯಾಗಿದೆ.
22 ವರ್ಷದ ಬಿಬಿಎ ವಿದ್ಯಾರ್ಥಿನಿ ಶ್ರದ್ಧಾ ತಿವಾರಿ(ಮಧ್ಯಪ್ರದೇಶದ ವಾಣಿಜ್ಯ ರಾಜಧಾನಿ ಇಂದೋರ್‌ನ ಎಂಐಜಿ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ) ತನ್ನ ಪ್ರೇಮಿ ಸಾರ್ಥಕ್‌ನನ್ನು ಮದುವೆಯಾಗಲು ಮನೆಯಿಂದ ಹೊರಟುಹೋದಳು. ಆದರೆ ಮನೆ ಬಿಟ್ಟು ಓಡಿಬಂದ ಶ್ರದ್ಧಾಗೆ, ಸಾರ್ಥಕ್ ಕೈಕೊಟ್ಟಿದ್ದು, ಇಂದೋರ್ ರೈಲ್ವೆ ನಿಲ್ದಾಣಕ್ಕೆ ಬರಲಿಲ್ಲ. ಬದಲಾಗಿ ನಾನು ನಿನ್ನನ್ನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾನೆ.
ಸಾರ್ಥಕ್ ನಿರ್ಧಾರದಿಂದ ಆಘಾತಗೊಂಡ ಶ್ರದ್ಧಾ ಎಲ್ಲಿಗೆ ಹೋಗಬೇಕೆಂದು ತಿಳಿಯದೆ ರೈಲು ಹತ್ತಿದಳು. ಕೆಲವು ಗಂಟೆಗಳ ನಂತರ ಅವಳು ರತ್ಲಂ ನಿಲ್ದಾಣದಲ್ಲಿ ರೈಲಿನಿಂದ ಇಳಿದಳು. ಕಾಕತಾಳೀಯ ಎಂಬಂತೆ ಪಶ್ಚಿಮ ಮಧ್ಯಪ್ರದೇಶದ ಇದೇ ನಿಲ್ದಾಣದಲ್ಲಿ 2007ರಲ್ಲಿ ತೆರೆಕಂಡ 'ಜಬ್ ವಿ ಮೆಟ್' ಚಿತ್ರವನ್ನು ಚಿತ್ರೀಕರಿಸಲಾಗಿದೆ.
ರತ್ಲಂ ನಿಲ್ದಾಣದಲ್ಲಿ, ಸಿನಿಮಾದಂತೆ ಶ್ರದ್ಧಾಳ ಜೀವನವು ಒಂದು ದೊಡ್ಡ ತಿರುವು ಪಡೆದುಕೊಂಡಿದ್ದು, ಅವಳು ಇಂದೋರ್‌ನ ತನ್ನ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ಎಲೆಕ್ಟ್ರಿಷಿಯನ್ ಕರಣ್‌ದೀಪ್ ಅವರನ್ನು ಭೇಟಿಯಾಗಿದ್ದಾಳೆ. ಶ್ರದ್ಧಾ ಒಬ್ಬಂಟಿಯಾಗಿ ಕುಳಿತಿರುವುದನ್ನು ಗಮನಿಸಿದ ಕರಣ್‌ದೀಪ್ ಅವಳ ಬಳಿಗೆ ಹೋಗಿ, ಆಕೆಯ ಪ್ರೇಮ ಕಥೆಯನ್ನು ತಿಳಿದುಕೊಂಡಿದ್ದಾನೆ. ಕರಣ್ ದೀಪ್ ಮೊದಲು ಅವಳಿಗೆ ಮನೆಗೆ ವಾಪಸ್ ಹೋಗಿ ಇಂದೋರ್‌ನಲ್ಲಿರುವ ಪೋಷಕರಿಗೆ ವಿಚಾರ ತಿಳಿಸುವಂತೆ ಸಲಹೆ ನೀಡಿದ್ದಾನೆ.
ಆದರೆ ಹಿಂತಿರುಗುವ ಮನಸ್ಥಿತಿಯಲ್ಲಿಲ್ಲದ ಶ್ರದ್ಧಾ, ಮದುವೆಯಾಗಲು ಮನೆ ಬಿಟ್ಟು ಬಿಂದಿದ್ದೇನೆ. ಹೀಗಾಗಿ ಮದುವೆಯಾಗುತ್ತೇನೆ, ಇಲ್ಲವೇ ಸಾಯುತ್ತೇನೆ ಎಂದು ಕರಣ್‌ದೀಪ್‌ಗೆ ಹೇಳಿದ್ದಾಳೆ. ಅವಳಿಗೆ ಮನೆಗೆ ಮರಳುವಂತೆ ಮನವೊಲಿಸಲು ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾದ ನಂತರ, ಕರಣ್‌ದೀಪ್, ಅವಳನ್ನು ತಾನೇ ಮದುವೆಯಾಗುವುದಾಗಿ ಹೇಳಿದ್ದಾನೆ ಮತ್ತು ಶ್ರದ್ಧಾ ಅದಕ್ಕೆ ಒಪ್ಪಿಕೊಂಡಿದ್ದಾಳೆ.
ತರುವಾಯ ಇಬ್ಬರೂ ಖಾರ್ಗೋನ್ ಜಿಲ್ಲೆಯ ಐತಿಹಾಸಿಕ ಮಹೇಶ್ವರ ಪಟ್ಟಣಕ್ಕೆ ಪ್ರಯಾಣ ಬೆಳೆಸಿದ್ದು, ಅಲ್ಲಿ ಒಂದು ದೇವಾಲಯದಲ್ಲಿ ಇಬ್ಬರೂ ಮದುವೆಯಾಗಿದ್ದಾರೆ. ಅಲ್ಲಿಂದ ಅವರು ಮಂದಸೌರ್‌ಗೆ ಪ್ರಯಾಣ ಬೆಳೆಸಿದರು.
ಈ ಮಧ್ಯೆ, ತನ್ನ ಮಗಳು ಪತ್ತೆಯಾಗದ ಕಾರಣ, ಶ್ರದ್ಧಾಳ ತಂದೆ ಅನಿಲ್ ತಿವಾರಿ, ಆಕೆಯ ಬಗ್ಗೆ ಮಾಹಿತಿ ನೀಡಿದವರಿಗೆ 51,000 ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದರು.
ಈ ಮಧ್ಯೆ ಮನೆಯಿಂದ ಹೊರಬಂದ ಐದು ದಿನಗಳ ನಂತರ, ಶ್ರದ್ಧಾ ಗುರುವಾರ ಮಂದಸೌರ್‌ನಿಂದ ತನ್ನ ತಂದೆಗೆ ಕರೆ ಮಾಡಿ ಮಂದಸೌರ್‌ನಲ್ಲಿ ಸುರಕ್ಷಿತವಾಗಿರುವುದಾಗಿ ತಿಳಿಸಿದ್ದರು. ಇಂದೋರ್‌ನಲ್ಲಿರುವ ತಂದೆ ಅನಿಲ್ ತಿವಾರಿ, ರಾತ್ರಿ ಮಂದಸೌರ್‌ನ ಹೋಟೆಲ್‌ನಲ್ಲಿ ಉಳಿದು ಮರುದಿನ ಬೆಳಗ್ಗೆ ಮನೆಗೆ ಮರಳುವಂತೆ ಕೇಳಿಕೊಂಡಿದ್ದರು.
ಆದಾಗ್ಯೂ, ಮಂದಸೌರ್‌ನ ಯಾವುದೇ ಹೋಟೆಲ್‌ಗಳಲ್ಲಿ ಶ್ರದ್ಧಾ ಮತ್ತು ಕರಣ್‌ದೀಪ್‌ಗೆ ಕೊಠಡಿ ನೀಡಲು ಸಿದ್ಧವಿಲ್ಲದ ಕಾರಣ, ಅನಿಲ್ ಇಂದೋರ್‌ಗೆ ರೈಲು ಟಿಕೆಟ್ ಬುಕ್ ಮಾಡಿದ್ದಾರೆ.
ಶ್ರದ್ಧಾ ಮತ್ತು ಕರಣ್‌ದೀಪ್ ಇಬ್ಬರೂ ಶುಕ್ರವಾರ ಇಂದೋರ್‌ಗೆ ಹಿಂತಿರುಗಿ MIG ಪೊಲೀಸ್ ಠಾಣೆಗೆ ಹೋಗಿದ್ದು, ಅಲ್ಲಿ ಶ್ರದ್ಧಾ, ಮಹೇಶ್ವರದಲ್ಲಿ ಕರಣ್‌ದೀಪ್ ಅವರನ್ನು ಮದುವೆಯಾಗಿರುವುದಾಗಿ ಹೇಳಿದ್ದಾರೆ.
ಇಂದೋರ್‌ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಶ್ರದ್ಧಾ ಅವರ ತಂದೆ ಆರಂಭದಲ್ಲಿ ಈ ಮದುವೆಯನ್ನು ಒಪ್ಪಿಕೊಳ್ಳಲು ನಿರಾಕರಿಸಿದರು ಮತ್ತು ತಮ್ಮ ಮಗಳು ಮಾನಸಿಕವಾಗಿ ಸ್ಥಿರವಾಗಿಲ್ಲ ಎಂದು ಹೇಳಿದರು. ಆದರೆ ಮದುವೆ ಫೋಟೋಗಳನ್ನು ಪ್ರಸ್ತುತಪಡಿಸಿದ ನಂತರ, ಕುಟುಂಬ ಅಂತಿಮವಾಗಿ ಅವರ ಮದುವೆಯನ್ನು ಒಪ್ಪಿಕೊಳ್ಳಲು ನಿರ್ಧರಿಸಿತು.
Advertisement