
ತೂತುಕುಡಿ(ತಮಿಳು ನಾಡು): ಭಾರತದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಅಮೆರಿಕ ಸರ್ಕಾರ ಅಧಿಕ ಸುಂಕ ಹೇರಿ ಆಮದುದಾರರು ಸಾಗಣೆಯಲ್ಲಿರುವ ಆರ್ಡರ್ ಮಾಡಿದ ಸರಕುಗಳನ್ನು ರದ್ದುಗೊಳಿಸಲು ಪ್ರಾರಂಭಿಸಿರುವುದರಿಂದ, ತಮಿಳು ನಾಡಿನ ತೂತುಕುಡಿಯಲ್ಲಿ ಸಮುದ್ರಾಹಾರ ರಫ್ತುದಾರರು ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿಹೋಗಿದ್ದಾರೆ.
ಅಮೆರಿಕದ ಶೇಕಡಾ 50ರವರೆಗೆ ಸುಂಕದಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಸಮುದ್ರಾಹಾರ ಅಮೆರಿಕಕ್ಕೆ ಸಾಗಣೆಯಾಗದೆ ಸಮುದ್ರದಲ್ಲಿ ಸಿಲುಕಿಕೊಂಡಿದೆ. ಅಮೆರಿಕಕ್ಕೆ ಕಳುಹಿಸಲಾದ ಸುಮಾರು 100 ಕೋಟಿ ರೂಪಾಯಿ ಮೌಲ್ಯದ 1,000 ಟನ್‌ಗಳಿಗೂ ಹೆಚ್ಚು ಸಮುದ್ರಾಹಾರ ಸರಕುಗಳು (ರೆಫ್ರಿಜರೇಟೆಡ್ ಕಂಟೇನರ್‌ಗಳು ಅಥವಾ ರೀಫರ್‌ಗಳು) ಪ್ರಸ್ತುತ ಸಾಗಣೆ ಹಾದಿಯಲ್ಲಿವೆ.
ಕಳೆದ 27ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ಸರಕುಗಳ ಮೇಲೆ ಶೇಕಡಾ 50ರಷ್ಟು ಸುಂಕವನ್ನು ಜಾರಿಗೆ ತಂದ ನಂತರ, ಖರೀದಿದಾರರು ರಫ್ತುದಾರರು ಸುಂಕ ಹೆಚ್ಚಳದಲ್ಲಿನ ವ್ಯತ್ಯಾಸವನ್ನು ಭರಿಸಬೇಕೆಂದು ಅಥವಾ ಸಾಗಣೆಯನ್ನು ಹಿಂದಕ್ಕೆ ತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದು ಭಾರತೀಯ ಸಮುದ್ರಾಹಾರ ರಫ್ತುದಾರರ ಸಂಘ (SEAI) - ತಮಿಳು ನಾಡು ಪ್ರದೇಶ ಅಧ್ಯಕ್ಷ ಸೆಲ್ವಿನ್ ಪ್ರಭು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ (The New Indian Express) ಪತ್ರಿಕೆ ಪ್ರತಿನಿಧಿಗೆ ಹೇಳಿದ್ದಾರೆ.
ತೂತುಕುಡಿಯು ವನ್ನಾಮಿ (ವೈಟ್‌ಲೆಗ್ ಸೀಗಡಿ), ಸ್ಕ್ವಿಡ್ ಮತ್ತು ಆಕ್ಟೋಪಸ್‌ನಂತಹ ಹೆಪ್ಪುಗಟ್ಟಿದ ಸಮುದ್ರಾಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಅಮೆರಿಕ ಮಾರುಕಟ್ಟೆಗೆ ರಫ್ತು ಆಗುತ್ತವೆ. ಸೀಗಡಿ ಮಾತ್ರ ರಫ್ತಿನ ಶೇಕಡಾ 85 ರಷ್ಟು ಭಾಗವಿದೆ.
ಕಳೆದ ಕೆಲವು ತಿಂಗಳುಗಳಿಂದ ಸುಂಕದ ಅನಿಶ್ಚಿತತೆಯಿಂದಾಗಿ ಹೆಚ್ಚಿನ ರಫ್ತುದಾರರು ಅಮೆರಿಕಕ್ಕೆ ರಫ್ತು ಮಾಡುವ ಪ್ರಮಾಣವನ್ನು ಕ್ರಮೇಣ ಕಡಿಮೆ ಮಾಡಿದ್ದರೂ, ನ್ಯೂಯಾರ್ಕ್ ಅಥವಾ ಲಾಸ್ ಏಂಜಲೀಸ್ ಬಂದರನ್ನು ತಲುಪಲು ಸುಮಾರು 45 ದಿನಗಳು ಬೇಕಾಗುವುದರಿಂದ 1,000 ಟನ್‌ಗಳಿಗೂ ಹೆಚ್ಚು ಸಮುದ್ರಾಹಾರ ಸರಕುಗಳು ಪ್ರಸ್ತುತ ಸಾಗಣೆಯಲ್ಲಿವೆ ಎಂದು ಪ್ರಭು ಹೇಳಿದರು.
ಸಾಗಣೆಯಲ್ಲಿರುವ ಸರಕುಗಳನ್ನು ರದ್ದುಗೊಳಿಸುವಂತೆ ಖರೀದಿದಾರರು ರಫ್ತುದಾರರಿಗೆ ಮೇಲ್ ಮಾಡುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಭು ಅವರು, ರಫ್ತುದಾರರು ಸರಕುಗಳನ್ನು ಸ್ವೀಕರಿಸಲು ಶೇಕಡಾ 50ರಷ್ಟು ಸುಂಕದ ವೆಚ್ಚವನ್ನು ಭರಿಸಬೇಕೆಂದು ಖರೀದಿದಾರರು ಬಯಸುತ್ತಾರೆ ಇಲ್ಲವೇ ಹಿಂದಕ್ಕೆ ಕಳುಹಿಸುವ ಬೆದರಿಕೆ ಹಾಕುತ್ತಿದ್ದಾರೆ. ಭಾರತೀಯ ಸರಕುಗಳ ಮೇಲಿನ ಸುಂಕದ ಶೇಕಡಾ 10 ಭಾಗ ಇದ್ದಾಗ ನಾವು ಖರೀದಿದಾರರೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿದ್ದೇವೆ ಎಂದರು.
ಉದ್ಯೋಗ ನಷ್ಟ ಭೀತಿ
ರಫ್ತುದಾರರು ಹೇಳುವಂತೆ ಅಮೆರಿಕದ ಹೆಚ್ಚಿದ ಸುಂಕವು ಭಾರಿ ಉದ್ಯೋಗ ನಷ್ಟಕ್ಕೆ ಕಾರಣವಾಗುತ್ತದೆ. ಆಗಸ್ಟ್ 6 ರ ಮೊದಲು ರಫ್ತು ಮಾಡಲಾದ ಸಮುದ್ರಾಹಾರ ಸಾಗಣೆಗಳು ಶೇಕಡಾ 10ರಷ್ಟು ಸುಂಕವನ್ನು ಮತ್ತು ಆಗಸ್ಟ್ 26 ರವರೆಗೆ ಶೇಕಡಾ 25ರಷ್ಟು ಸುಂಕವನ್ನು ಹೊಂದಿದ್ದವು. ಆಗಸ್ಟ್ 27 ರಿಂದ, ರಷ್ಯಾದ ತೈಲವನ್ನು ಖರೀದಿಸಿದ್ದಕ್ಕಾಗಿ ದಂಡವಾಗಿ ಸುಂಕವನ್ನು ಇನ್ನೂ ಶೇಕಡಾ 25ರಷ್ಟು ಭಾರತದ ಮೇಲೆ ಅಮೆರಿಕ ವಿಧಿಸಿತು.
ಯುಎಸ್‌ಗೆ ರಫ್ತಿನ ಪ್ರಮುಖ ಭಾಗವನ್ನು ಹೊಂದಿರುವ ಸೀಗಡಿ ರಫ್ತು ಶೇಕಡಾ 50ರಷ್ಟು ಸುಂಕಕ್ಕಿಂತ ಹೆಚ್ಚಿನ ಶೇಕಡಾ 8.5 ಸುಂಕವನ್ನು ಆಕರ್ಷಿಸುತ್ತದೆ. 100 ಟನ್ ಸಮುದ್ರಾಹಾರವನ್ನು ಸಾಗಿಸುವ ಐದರಿಂದ ಆರು ಕಂಟೇನರ್‌ಗಳನ್ನು ಯುಎಸ್ ಮಾರುಕಟ್ಟೆಗೆ ರಫ್ತು ಮಾಡಿದ್ದೇನೆ. ನ್ಯೂಯಾರ್ಕ್ ಬಂದರಿಗೆ ಬಂದು ತಲುಪಲು ಇನ್ನೂ 10 ದಿನಗಳು ಬೇಕಾಗಬಹುದು ಎಂದು ರಫ್ತುದಾರರೊಬ್ಬರು ಹೇಳುತ್ತಾರೆ.
ಹೆಚ್ಚಿದ ಸುಂಕದಿಂದಾಗಿ ಖರೀದಿದಾರರು ಸರಕನ್ನು ಸ್ವೀಕರಿಸಲು ನಿರಾಕರಿಸುತ್ತಿದ್ದಾರೆ. ಸರಕುಗಳನ್ನು ಹಿಂದಿರುಗಿಸಲು ಲೈನರ್ ನ್ನು ಸಂಪರ್ಕಿಸಲು ನಮಗೆ ಮೇಲ್ ಮಾಡಿದ್ದರು ಎಂದು ರಫ್ತುದಾರರು ಈಗಿನ ಸಮಸ್ಯೆ ಬಗ್ಗೆ ಹೇಳಿದರು. ರಫ್ತುದಾರರು ಖರೀದಿದಾರರೊಂದಿಗೆ ಮಾತುಕತೆ ಮುಂದುವರಿಸುವುದಾಗಿ ಹೇಳಿದ್ದು ಪರಿಸ್ಥಿತಿ ಮುಂದುವರಿದರೆ, ಅದು ಭಾರಿ ಉದ್ಯೋಗ ನಷ್ಟಕ್ಕೆ ಕಾರಣವಾಗುತ್ತದೆ.
Advertisement