
ಪಾಟ್ನಾ: ದಲಿತರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರಿಗೆ ಮತದಾನದ ಹಕ್ಕಿದೆ ಎಂದು ಪ್ರತಿಪಾದಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಹಾರದಲ್ಲಿ ನಡೆಯುತ್ತಿರುವ 'ಮತದಾರ ಅಧಿಕಾರ ಯಾತ್ರೆ' ಮತಗಳ ಕಳ್ಳತನದ ವಿರುದ್ಧ ದೇಶಾದ್ಯಂತ ಒಂದು ಚಳುವಳಿಯಾಗಲಿದೆ ಎಂದು ಶನಿವಾರ ಹೇಳಿದ್ದಾರೆ.
ಇಂದು ಭೋಜ್‌ಪುರದ ಜಿಲ್ಲಾ ಕೇಂದ್ರವಾದ ಅರಾದಲ್ಲಿ ನಡೆದ ಕಾಂಗ್ರೆಸ್ ಯಾತ್ರೆ ವೇಳೆ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಎಸ್ಐಆರ್ "ಸಂವಿಧಾನ ಮತ್ತು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ದಾಳಿ" ಎಂದು ಆರೋಪಿಸಿದರು.
"ಬಿಹಾರದಿಂದ ಪ್ರಾರಂಭವಾದ 'ಮತದಾರ ಅಧಿಕಾರ ಯಾತ್ರೆ' ಜನರ ಮತಗಳ್ಳತನದ ವಿರುದ್ಧ ದೇಶಾದ್ಯಂತ ಒಂದು ಚಳುವಳಿಯಾಗಲಿದೆ" ಎಂದು ಅವರು ಹೇಳಿದರು.
ಬಿಜೆಪಿ, ಆರ್‌ಎಸ್‌ಎಸ್ ಮತ್ತು ಚುನಾವಣಾ ಆಯೋಗವು "ದೇಶದಲ್ಲಿ 'ಮತ ಚೋರಿ'(ಮತಗಳನ್ನು ಕದಿಯುವುದು)ಯಲ್ಲಿ ತೊಡಗಿವೆ" ಎಂದು ಅವರು ಆರೋಪಿಸಿದರು.
"ಎನ್‌ಡಿಎ ಸರ್ಕಾರ ಮಹಾರಾಷ್ಟ್ರ ಮತ್ತು ದೇಶದ ಇತರ ಭಾಗಗಳಲ್ಲಿ ಮತಗಳನ್ನು ಕದಿಯುವಲ್ಲಿ ಯಶಸ್ವಿಯಾಗಿದೆ. ಆದರೆ ಬಿಹಾರದಲ್ಲಿ ಬಿಜೆಪಿ ಮತ್ತು ಚುನಾವಣಾ ಆಯೋಗ ಒಂದೇ ಒಂದು ಮತವನ್ನು ಕದಿಯಲು ನಾವು ಬಿಡುವುದಿಲ್ಲ" ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಹೇಳಿದ್ದಾರೆ.
Advertisement