
ಮನಿಲಾ: ಶಾಲೆಯಿಂದ ಹೊರಗುಳಿದಿರುವ ಹಳ್ಳಿಗಾಡಿನ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ಭಾರತದ 'Educate Girls' ಸಂಸ್ಥೆಯು 2025ನೇ ಸಾಲಿನ ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಆಯ್ಕೆಯಾಗಿದೆ. ಇದರೊಂದಿಗೆ ಪ್ರತಿಷ್ಠಿತ ಗೌರವ ಪಡೆದ ಭಾರತದ ಮೊದಲ ಸಂಸ್ಥೆ ಎಂಬ ಗೌರವಕ್ಕೆ ಪಾತ್ರವಾಗಿದೆ.
ನೊಬೆಲ್ ಪ್ರಶಸ್ತಿಗೆ ಸಮಾನವಾದ ಪ್ರಶಸ್ತಿ ಎಂದೇ ಪರಿಗಣಿಸಲಾದ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯು ಏಷ್ಯಾದ ಜನರಿಗೆ ಅಸಾಧಾರಣ ಧೈರ್ಯ ಮತ್ತು ನಿಸ್ವಾರ್ಥ ಸೇವೆ ಸಲ್ಲಿಸುವ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಗುರುತಿಸಿ ಗೌರವಿಸುತ್ತದೆ.
ರಾಜಸ್ಥಾನದ ಕುಗ್ರಾಮವೊಂದರಲ್ಲಿ ಬಾಲಕಿಯೊಬ್ಬಳ ಶಿಕ್ಷಣಕ್ಕಾಗಿ ಆರಂಭಗೊಂಡಿದ್ದ "Educate Girls" ಸಂಸ್ಥೆಯು, ಕಾಲ ಕಳೆದಂತೆ ಹೆಮ್ಮರವಾಗಿ ಬೆಳೆದು ಇಂದು ಸಾವಿರಾರು ಶಿಕ್ಷಣ ವಂಚಿತ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿ, ಅವರನ್ನು ಸ್ವಾವಲಂಬಿಗಳನ್ನಾಗಿಸಲು ನಿಸ್ವಾರ್ಥವಾಗಿ ಶ್ರಮಿಸುತ್ತಿದೆ.
'ಎಜುಕೇಟ್ ಗರ್ಲ್ಸ್' ಹೆಣ್ಣು ಮಕ್ಕಳನ್ನು ಅನಕ್ಷರತೆಯ ಬಂಧನದಿಂದ ಮುಕ್ತಗೊಳಿಸುವುದು ಮತ್ತು ಅವರು ಸಂಪೂರ್ಣ ಮಾನವ ಸಾಮರ್ಥ್ಯವನ್ನು ಸಾಧಿಸಲು ಅವಶ್ಯವಾಗಿ ಬೇಕಿರುವ ಕೌಶಲ್ಯ, ಧೈರ್ಯ ಹಾಗೂ ಆತ್ಮವಿಶ್ವಾಸ ತುಂಬುತ್ತಿದೆ. ಈ ಕಾರ್ಯದಲ್ಲಿ ಸಂಸ್ಥೆ ಬದ್ಧತೆ ತೋರಿಸಿದೆ. ಇದನ್ನು ಏಷ್ಯಾದ ಅತ್ಯುನ್ನತ ಗೌರವಕ್ಕೆ ಪರಿಗಣಿಸಲಾಗಿದೆ ಎಂದು ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಫೌಂಡೇಶನ್ (RMAF) ತಿಳಿಸಿದೆ.
ಎಜುಕೇಟ್ ಗರ್ಲ್ಸ್ ಸಂಸ್ಥೆಯನ್ನು 2007ರಲ್ಲಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಪದವೀಧರೆ ಸಫೀನಾ ಹುಸೇನ್ ಸ್ಥಾಪಿಸಿದ್ದಾರೆ. ಈ ಸಂಸ್ಥೆ ಕಟ್ಟುವ ಸಂದರ್ಭದಲ್ಲಿ ಅವರು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಕೆಲಸ ಮಾಡುತ್ತಿದ್ದರು. ಮಹಿಳಾ ಅನಕ್ಷರತೆಯ ಸವಾಲುಗಳನ್ನು ಪರಿಹರಿಸಲೆಂದೇ ಅವರು ಭಾರತಕ್ಕೆ ಮರಳಲು ನಿರ್ಧರಿಸಿದ್ದರು.
Advertisement