
ನವದೆಹಲಿ: ದೇಶದ ಹಲವು ಭಾಗಗಳಲ್ಲಿ ಆಗಸ್ಟ್ ತಿಂಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗಿ ಭಾರಿ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದ್ದು, ಸೆಪ್ಟೆಂಬರ್‌ನಲ್ಲೂ ಭಾರತದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಭಾನುವಾರ ತಿಳಿಸಿದೆ.
ದೇಶದ ಹಲವು ಭಾಗಗಳಲ್ಲಿ ಭಾರಿ ಮಳೆಯಿಂದ ಮತ್ತಷ್ಟು ಪ್ರವಾಹ ಹಾಗೂ ಭೂಕುಸಿತಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಸೆಪ್ಟೆಂಬರ್ 2025ರ ಮಾಸಿಕ ಸರಾಸರಿ ಮಳೆಯು ದೀರ್ಘಾವಧಿಯ ಸರಾಸರಿ 167.9 ಮಿಮೀ ಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು IMD ಮುನ್ಸೂಚನೆ ನೀಡಿದೆ.
ಹೆಚ್ಚಿನ ಪ್ರದೇಶಗಳು ಸಾಮಾನ್ಯ, ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯನ್ನು ಪಡೆಯುತ್ತವೆ ಎಂದು ಐಎಂಡಿ ಹೇಳಿದೆ.
ಆದಾಗ್ಯೂ, ಈಶಾನ್ಯ ಮತ್ತು ಪೂರ್ವದ ಕೆಲವು ಪ್ರದೇಶಗಳು, ಹಾಗೆಯೇ ದಕ್ಷಿಣ ಪರ್ಯಾಯ ದ್ವೀಪ ಭಾರತದ ಅನೇಕ ಭಾಗಗಳು ಹಾಗೂ ವಾಯುವ್ಯ ಭಾರತದ ಕೆಲವು ಭಾಗಗಳು ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಆನ್‌ಲೈನ್ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ IMD ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಅವರು, ಸೆಪ್ಟೆಂಬರ್‌ನಲ್ಲಿ ಉತ್ತರಾಖಂಡದಲ್ಲಿ ಭಾರೀ ಮಳೆ, ಭೂಕುಸಿತ ಮತ್ತು ಹಠಾತ್ ಪ್ರವಾಹಕ್ಕೆ ಕಾರಣವಾಗಬಹುದು. ದಕ್ಷಿಣ ಹರಿಯಾಣ, ದೆಹಲಿ ಮತ್ತು ಉತ್ತರ ರಾಜಸ್ಥಾನದಲ್ಲಿ ಮಳೆ ಸಾಮಾನ್ಯ ಜೀವನಕ್ಕೆ ಅಡ್ಡಿಪಡಿಸಬಹುದು ಎಂದು ಎಚ್ಚರಿಸಿದ್ದಾರೆ.
"ಹಲವು ನದಿಗಳು ಉತ್ತರಾಖಂಡದಲ್ಲಿ ಹುಟ್ಟುತ್ತವೆ. ಆದ್ದರಿಂದ, ಭಾರೀ ಮಳೆಯಾದರೆ ಅನೇಕ ನದಿಗಳು ಪ್ರವಾಹಕ್ಕೆ ಒಳಗಾಗುತ್ತವೆ ಮತ್ತು ಇದು ಕೆಳಗಿರುವ ನಗರಗಳು ಮತ್ತು ಪಟ್ಟಣಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಆದ್ದರಿಂದ, ನಾವು ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು" ಎಂದು ಅವರು ಹೇಳಿದ್ದಾರೆ.
ಛತ್ತೀಸ್‌ಗಢದ ಮಹಾನದಿ ನದಿಯ ಮೇಲ್ಭಾಗದ ಜಲಾನಯನ ಪ್ರದೇಶಗಳಲ್ಲಿಯೂ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದ್ದಾರೆ.
Advertisement