

ನವದೆಹಲಿ: ಸಂಚಾರ್ ಸಾಥಿ ಕಡ್ಡಾಯ ವಿವಾದ ಮಧ್ಯೆ, ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಮಂಗಳವಾರ, ಪ್ರಜಾಪ್ರಭುತ್ವದಲ್ಲಿ ಯಾವುದೇ ವಿಷಯ ಕಡ್ಡಾಯಗೊಳಿಸುವುದು ತೊಂದರೆದಾಯಕ ಮತ್ತು ಸರ್ಕಾರ ಆದೇಶ ಹೊರಡಿಸುವ ಮುನ್ನ ಸಾರ್ವಜನಿಕರಿಗೆ ಎಲ್ಲವನ್ನೂ ವಿವರಿಸಬೇಕು ಎಂದು ಹೇಳಿದ್ದಾರೆ.
ದೇಶದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳನ್ನು ತಡೆಯಲು ಟೆಲಿಕಾಂ ಇಲಾಖೆ(DoT) ಸ್ಮಾರ್ಟ್‌ಫೋನ್ ತಯಾರಕರಿಗೆ ಎಲ್ಲಾ ಹೊಸ ಮೊಬೈಲ್ ಗಳಲ್ಲಿ ಸರ್ಕಾರಿ ಸೈಬರ್-ಭದ್ರತಾ ಅಪ್ಲಿಕೇಶನ್ ಸಂಚಾರ್ ಸಾಥಿ ಆ್ಯಪ್ ಅನ್ನು ಪ್ರಿ ಇನ್‌ಸ್ಟಾಲ್ ಮಾಡುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.
ಇಂದು ಸಂಸತ್ತಿನ ಹೊರಗೆ ಈ ಕುರಿತು ಪ್ರತಿಕ್ರಿಯಿಸಿದ ತರೂರ್, "ನಾನು ಈ ಸಮಸ್ಯೆಯನ್ನು ವಿವರವಾಗಿ ಅಧ್ಯಯನ ಮಾಡಿಲ್ಲ. ಆದರೆ ಸಾಮಾನ್ಯವಾಗಿ ಈ ಅಪ್ಲಿಕೇಶನ್‌ಗಳು ಸ್ವಯಂಪ್ರೇರಿತವಾಗಿದ್ದರೆ ಉಪಯುಕ್ತವಾಗಬಹುದು ಎಂದು ನನಗೆ ಅನಿಸುತ್ತದೆ. ಅಗತ್ಯವಿರುವ ಪ್ರತಿಯೊಬ್ಬರೂ ಅವುಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು" ಎಂದಿದ್ದಾರೆ.
"ಪ್ರಜಾಪ್ರಭುತ್ವದಲ್ಲಿ ಏನನ್ನಾದರೂ ಕಡ್ಡಾಯಗೊಳಿಸುವುದು ತೊಂದರೆದಾಯಕ. ಆದರೆ ನಾನು ಸರ್ಕಾರದ ತರ್ಕವನ್ನು ಹೆಚ್ಚು ಗಮನಿಸಬೇಕಾಗಿದೆ. ಮಾಧ್ಯಮಗಳು ವರದಿ ಮಾಡುವ ಆದೇಶವನ್ನು ಹೊರಡಿಸುವ ಮುನ್ನ ಸರ್ಕಾರವು ಸಾರ್ವಜನಿಕರಿಗೆ ಎಲ್ಲವನ್ನೂ ವಿವರಿಸಬೇಕು. ಸರ್ಕಾರ ಈ ಕ್ರಮದ ಹಿಂದಿನ ಚಿಂತನೆ ಏನು ಎಂಬುದನ್ನು ವಿವರಿಸುವ ಚರ್ಚೆಯನ್ನು ನಾವು ನಡೆಸಬೇಕಾಗಿದೆ" ಎಂದು ತಿರುವನಂತಪುರಂ ಸಂಸದ ಹೇಳಿದ್ದಾರೆ.
"ನಮ್ಮ ಫೋನ್‌ಗಳನ್ನು ಪತ್ತೆಹಚ್ಚಲು ಸಹಾಯ ಮಾಡುವ ಅಪ್ಲಿಕೇಶನ್, ಅದು ಸ್ವಯಂಪ್ರೇರಿತವಾಗಿದ್ದರೆ, ನನಗೆ ಅದರ ಅಗತ್ಯವಿದ್ದರೆ ನಾನು ಆ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು. ನನಗೆ ಅದರ ಅಗತ್ಯವಿಲ್ಲದಿದ್ದರೆ ನಾನು ಅದನ್ನು ಡೌನ್‌ಲೋಡ್ ಮಾಡಬೇಕಾಗಿಲ್ಲ. ಇದು ನಮ್ಮೆಲ್ಲರಿಗೂ ಗೊತ್ತಿರುವ ಸತ್ಯ. ಇದು ಸಾಮಾನ್ಯ ಜ್ಞಾನ. ಸರ್ಕಾರ ಇದನ್ನು ಏಕೆ ಕಡ್ಡಾಯ ಮಾಡಿದೆ ಅಂತ ನನಗೆ ಗೊತ್ತಿಲ್ಲ" ಎಂದು ಕಾಂಗ್ರೆಸ್ ನಾಯಕ ತಿಳಿಸಿದರು.
Advertisement