

ಪ್ರಧಾನಿ ನರೇಂದ್ರ ಮೋದಿ ಅವರು ರೆಡ್ ಕಾರ್ಪೆಟ್ ಕಾರ್ಯಕ್ರಮವೊಂದರಲ್ಲಿ ಚಹಾ ಮಾರಾಟ ಮಾಡುತ್ತಿರುವುದನ್ನು ತೋರಿಸುವ ಕೃತಕ ಬುದ್ಧಿಮತ್ತೆ ಆಧಾರಿತ ವೀಡಿಯೊವನ್ನು(AI generated video) ಕಾಂಗ್ರೆಸ್ ನಾಯಕಿಯೊಬ್ಬರು ಹಂಚಿಕೊಂಡಿದ್ದು ವಿವಾದ ಎದ್ದಿದೆ. ಪ್ರಧಾನಿ ಹುದ್ದೆಯ ಘನತೆ, ಗೌರವವನ್ನು ಕಾಂಗ್ರೆಸ್ ದುರುಪಯೋಗಪಡಿಸಿಕೊಂಡು ಅವಮಾನಿಸುತ್ತಿದೆ ಎಂದು ಬಿಜೆಪಿ ನಾಯಕರು ಖಂಡಿಸಿದ್ದಾರೆ.
ಈ ವೀಡಿಯೊವನ್ನು ಕಾಂಗ್ರೆಸ್ ವಕ್ತಾರೆ ರಾಗಿಣಿ ನಾಯಕ್ ಎಂಬುವವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು "ಈಗ, ಇದನ್ನು ಯಾರು ಮಾಡಿದರು?" ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ.
ಈ ವೀಡಿಯೊದಲ್ಲಿ ಪ್ರಧಾನಿಯವರು ತಿಳಿ ನೀಲಿ ಬಣ್ಣದ ಕೋಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿ, ರೆಡ್ ಕಾರ್ಪೆಟ್ ಕಾರ್ಯಕ್ರಮವೊಂದರಲ್ಲಿ ಕೆಟಲ್ ಮತ್ತು ಟೀ ಗ್ಲಾಸ್ ಹಿಡಿದುಕೊಂಡು ಚಾಯ್ ಬೇಕಾ ಚಾಯ್ ಎಂದು ಕೇಳಿಕೊಂಡು ಹೋಗುತ್ತಿರುವುದನ್ನು ನೋಡಬಹುದು. ಹಿನ್ನೆಲೆಯಲ್ಲಿ ಬೇರೆ ದೇಶಗಳ ಧ್ವಜಗಳು ಮತ್ತು ಭಾರತದ ತ್ರಿವರ್ಣ ಧ್ವಜವಿದೆ.
ಪ್ರಧಾನಿ ಮೋದಿಯ ಧ್ವನಿಯನ್ನು ಅನುಕರಿಸುವ ಧ್ವನಿಯೊಂದು "ಚಾಯ್ ಬೋಲೋ, ಚಾಯ್ಯೇ (ಯಾರಿಗಾದರೂ ಚಹಾ ಬೇಕು)" ಎಂದು ಹೇಳುವುದನ್ನು ಕೇಳಬಹುದು.
ಪ್ರಧಾನಿ ಮೋದಿ ತಮ್ಮ ಚಿಕ್ಕ ವಯಸ್ಸಿನಲ್ಲಿ ಗುಜರಾತ್‌ನ ರೈಲು ನಿಲ್ದಾಣದಲ್ಲಿ ಚಹಾ ಮಾರಾಟ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿ ಹಲವರು ಟೀಕಿಸಿದ್ದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, "ರೇಣುಕಾ ಚೌಧರಿ ಸಂಸತ್ತು ಮತ್ತು ಶಿವಸೇನೆಯನ್ನು ಅವಮಾನಿಸಿದ ನಂತರ, ಈಗ ರಾಗಿಣಿ ನಾಯಕ್ ಪ್ರಧಾನಿ ಮೋದಿ ಅವರ 'ಚಾಯ್‌ವಾಲಾ' ಹಿನ್ನೆಲೆಯ ಅಪಹಾಸ್ಯ ಮಾಡಿದ್ದಾರೆ" ಎಂದು ಹೇಳಿದರು.
ಸಾಮಾನ್ಯ ಹಿನ್ನೆಲೆಯಿಂದ ಬಂದ ಒಬಿಸಿ ಸಮುದಾಯದ ಕಠಿಣ ಪರಿಶ್ರಮಿ ಪ್ರಧಾನಿಯನ್ನು ಕಾಂಗ್ರೆಸ್ ನಾಯಕರು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಇಲ್ಲ. ಅವರ ಚಹಾ ಮರಾಟದ ದಿನಗಳನ್ನು ತೆಗೆದುಕೊಂಡು 150 ಕ್ಕೂ ಹೆಚ್ಚು ಬಾರಿ ಅವರನ್ನು ನಿಂದಿಸಿದ್ದಾರೆ. ಬಿಹಾರದಲ್ಲಿ ಅವರ ತಾಯಿಯನ್ನು ಗುರಿಯಾಗಿಸಿಕೊಂಡಿದ್ದಾರೆ. ಜನರು ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement