

ಪ್ರಸಿದ್ಧ ಸಿತಾರ್ ವಾದಕ ಪಂಡಿತ್ ರವಿಶಂಕರ್ ಅವರ ಪುತ್ರಿ, ಖ್ಯಾತ ಸಿತಾರ್ ವಾದಕಿ ಅನೌಷ್ಕಾ ಶಂಕರ್, ಇತ್ತೀಚೆಗೆ ವಿಮಾನ ಪ್ರಯಾಣದ ಸಮಯದಲ್ಲಿ ತಮ್ಮ ಪ್ರೀತಿಯ ಸಿತಾರ್ ಹಾನಿಗೀಡಾಗಿರುವ ಬಗ್ಗೆ ವಿಡಿಯೊ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.
ಏರ್ ಇಂಡಿಯಾ ಪ್ರಯಾಣದ ವೇಳೆ ಈ ಘಟನೆ ನಡೆದಿದ್ದು, ಅವರ ಸಿತಾರ್ ನಲ್ಲಿ ಬಿರುಕು ಮೂಡಿ ಹಾನಿಯಾಗಿದೆ. ಏರ್ ಇಂಡಿಯಾ ವಿಮಾನದಲ್ಲಿನ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಹೀಗೆ ಆಗಿದೆ ಎಂದು ಆರೋಪಿಸಿದ್ದಾರೆ.
ತಾವು ತಮ್ಮ ಸಿತಾರ್‌ಗೆ ಹೆಚ್ಚುವರಿ ನಿರ್ವಹಣಾ ಶುಲ್ಕವನ್ನು ಪಾವತಿಸಿದ್ದರೂ, ಏರ್ ಇಂಡಿಯಾ ವಾದ್ಯವನ್ನು ಅಜಾಗರೂಕತೆಯಿಂದ ನಿರ್ವಹಿಸಿದೆ. ಇದರ ಪರಿಣಾಮವಾಗಿ ಹಾನಿಯಾಗಿದೆ ಎಂದು ಅನೌಷ್ಕಾ ಶಂಕರ್ ಹೇಳಿದ್ದಾರೆ.
ಹಲವು ವರ್ಷಗಳಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ಇದೇ ಮೊದಲ ಬಾರಿ ಹಾರಾಟ ನಡೆಸಿದ್ದು ಈ ರೀತಿ ಕೆಟ್ಟ ಅನುಭವವಾಗಿದೆ. ಉದ್ದೇಶಪೂರ್ವಕ ನಿರ್ಲಕ್ಷ್ಯವಲ್ಲದೆ ಇಂತಹ ತಪ್ಪು ನಡೆಯಲು ಹೇಗೆ ಸಾಧ್ಯ ಎಂದು ಕೇಳಿದ್ದಾರೆ.
ಭಾರತದಲ್ಲಿ ಸಂಗೀತಕ್ಕೆ ತನ್ನದೇ ಆದ ಪರಂಪರೆ, ಸಂಸ್ಕೃತಿ ಇದೆ, ಹೀಗಿರುವಾಗ ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಯಿಂದ ಇಂತಹ ನಡವಳಿಕೆ ಒಪ್ಪುವ ವಿಚಾರವಲ್ಲ ಎಂದಿದ್ದಾರೆ. ಅನುಷ್ಕಾ ಅವರ ಸೋಷಿಯಲ್ ಮೀಡಿಯಾ ಪೋಸ್ಟ್ ಗೆ ಅವರ ಅಭಿಮಾನಿಗಳು, ಸಂಗೀತಗಾರರು ಮತ್ತು ಸೆಲೆಬ್ರಿಟಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶಾಲ್ ದದ್ಲಾನಿ ಮತ್ತು ಹಾಸ್ಯನಟ ಜಾಕಿರ್ ಖಾನ್ ಅವರಂತಹ ವ್ಯಕ್ತಿಗಳು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿ, ಹಾನಿಯನ್ನು ಹೃದಯವಿದ್ರಾವಕ ಎಂದು ಬಣ್ಣಿಸಿದ್ದಾರೆ.
ಏರ್ ಇಂಡಿಯಾ ಸಂಸ್ಥೆಯಿಂದ ಇನ್ನೂ ಪ್ರತಿಕ್ರಿಯೆ ಬಂದಿಲ್ಲ. ಸಂಗೀತ ಉಪಕರಣಗಳು ಮತ್ತು ಸೂಕ್ಷ್ಮ ಸರಕುಗಳನ್ನು ವಿಮಾನಯಾನ ಸಂಸ್ಥೆಗಳು ಹೇಗೆ ನಿರ್ವಹಿಸುತ್ತವೆ, ವಿಶೇಷವಾಗಿ ಕಲಾವಿದರು ವಿಶೇಷ ನಿರ್ವಹಣೆಗೆ ಹೆಚ್ಚುವರಿ ಹಣವನ್ನು ಪಾವತಿಸಿದಾಗ ಹೇಗೆ ಎಂಬುದರ ಕುರಿತು ಈ ಘಟನೆ ಕಳವಳ ಹುಟ್ಟುಹಾಕಿದೆ.
ಅನೌಷ್ಕಾ ಶಂಕರ್ ಪ್ರಸ್ತುತ ತಮ್ಮ ಆಲ್ಬಮ್ ಚಾಪ್ಟರ್ III: ವೀ ರಿಟರ್ನ್ ಟು ಲೈಟ್ ನಿಂದ ಮೆಚ್ಚುಗೆ ಗಳಿಸಿದ್ದಾರೆ. ವಿಮರ್ಶಾತ್ಮಕವಾಗಿ ಮೆಚ್ಚಿಕೊಂಡಿದ್ದು, ಗ್ರ್ಯಾಮಿ ನಾಮನಿರ್ದೇಶನಗಳನ್ನು ಗಳಿಸಿದೆ.
Advertisement