

ಬಿಜಾಪುರ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ಬುಧವಾರ ನಡೆದ ಎನ್‌ಕೌಂಟರ್ ನಂತರ ಮತ್ತೆ ಆರು ನಕ್ಸಲರ ಮೃತದೇಹಗಳು ಪತ್ತೆಯಾಗಿದ್ದು, ಇದರೊಂದಿಗೆ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 18ಕ್ಕೆ ಏರಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ನಿನ್ನೆ ನಡೆದ ಗುಂಡಿನ ಚಕಮಕಿಯಲ್ಲಿ ರಾಜ್ಯ ಪೊಲೀಸರ ಒಂದು ಘಟಕವಾದ ಜಿಲ್ಲಾ ಮೀಸಲು ಪೊಲೀಸ್ ಪಡೆಯ ಮೂವರು ಸಿಬ್ಬಂದಿ ಸಹ ಹುತಾತ್ಮರಾಗಿದ್ದಾರೆ.
ಸುಮಾರು 12 ಗಂಟೆಗಳ ಕಾಲ ನಡೆದ ದೀರ್ಘಾವಧಿಯ ಗುಂಡಿನ ಚಕಮಕಿಯ ನಂತರ, ಬುಧವಾರ ಸಂಜೆ ತಡರಾತ್ರಿಯವರೆಗೆ 12 ನಕ್ಸಲರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ಸುಂದರರಾಜ್ ಪಿ ತಿಳಿಸಿದ್ದಾರೆ.
ಇಂದು ಬೆಳಗ್ಗೆ ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯ ಸಮಯದಲ್ಲಿ ಇನ್ನೂ ಆರು ಶವಗಳು ಪತ್ತೆಯಾಗಿವೆ. ಇದರೊಂದಿಗೆ, ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ ನಕ್ಸಲರ ಸಂಖ್ಯೆ 18ಕ್ಕೆ ಏರಿದೆ ಎಂದು ಅವರು ಹೇಳಿದರು. ಅಲ್ಲದೆ ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದಿದ್ದಾರೆ.
ದಂತೇವಾಡ ಜಿಲ್ಲೆಯ ಪಕ್ಕದಲ್ಲಿರುವ ಗಂಗಲೂರು ಪ್ರದೇಶದ ಕಾಡಿನಲ್ಲಿ ಭದ್ರತಾ ಸಿಬ್ಬಂದಿಯ ಜಂಟಿ ತಂಡ ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ಹೊರಟಿದ್ದಾಗ ಗುಂಡಿನ ಚಕಮಕಿ ಆರಂಭವಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯ ಪೊಲೀಸರ ಎರಡೂ ಘಟಕಗಳಾದ ಡಿಆರ್‌ಜಿ ಮತ್ತು ವಿಶೇಷ ಕಾರ್ಯಪಡೆ ಹಾಗೂ ಕೋಬ್ರಾ(ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್) ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
"ನಮ್ಮ ಭದ್ರತಾ ಪಡೆಗಳು ಮಾವೋವಾದಿಗಳ ಗುಂಡಿನ ದಾಳಿಗೆ ಧೈರ್ಯದಿಂದ ಪ್ರತಿದಾಳಿ ನಡೆಸಿದವು. ಆದರೆ ದುರದೃಷ್ಟವಶಾತ್, ಬಿಜಾಪುರದ ಡಿಆರ್‌ಜಿಗೆ ಸೇರಿದ ನಮ್ಮ ಮೂವರು ಧೈರ್ಯಶಾಲಿ ಜವಾನರು ಕಾರ್ಯಾಚರಣೆಯಲ್ಲಿ ಹುತಾತ್ಮರಾದರು" ಎಂದು ಅವರು ತಿಳಿಸಿದ್ದಾರೆ.
Advertisement