

ಮುಂಬೈ: ಎಲ್ಗರ್ ಪರಿಷತ್-ಮಾವೋವಾದಿ ನಂಟು ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಹನಿ ಬಾಬು ಅವರಿಗೆ ಐದು ವರ್ಷಗಳ ನಂತರ ಬಾಂಬೆ ಹೈಕೋರ್ಟ್ ಗುರುವಾರ ಜಾಮೀನು ಮಂಜೂರು ಮಾಡಿದೆ.
ಬಾಬು ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ ಎಸ್ ಗಡ್ಕರಿ ಮತ್ತು ರಂಜಿತ್ ಸಿನ್ಹಾ ಭೋಸಲೆ ಅವರ ವಿಭಾಗೀಯ ಪೀಠ, ಆರೋಪಿಗೆ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.
ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವವರೆಗೆ ಜಾಮೀನಿಗೆ ತಡೆ ನೀಡಬೇಕೆಂಬ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ವಿಚಾರಣೆಯಿಲ್ಲದೆ ದೀರ್ಘಕಾಲದ ಜೈಲುವಾಸದ ಆಧಾರದ ಮೇಲೆ ಜಾಮೀನು ಕೋರಿ ಹನಿ ಬಾಬು ಅವರು ಅರ್ಜಿ ಸಲ್ಲಿಸಿದ್ದರು.
ಇನ್ನೂ ಚಾರ್ಜ್ ಶೀಟ್ ಸಲ್ಲಿಸಿಲ್ಲ ಮತ್ತು ಅವರ ಬಿಡುಗಡೆ ಅರ್ಜಿ ಇನ್ನೂ ವಿಚಾರಣಾ ನ್ಯಾಯಾಲಯದಲ್ಲಿ ಬಾಕಿ ಇದೆ ಎಂದು ಬಾಬು ಪರ ವಕೀಲ ಯುಗ್ ಮೋಹಿತ್ ಚೌಧರಿ ವಾದಿಸಿದ್ದರು.
ನಿಷೇಧಿತ ಸಿಪಿಐ(ಮಾವೋವಾದಿ) ಸಂಘಟನೆಯ ನಾಯಕರ ಸೂಚನೆಯ ಮೇರೆಗೆ ಮಾವೋವಾದಿ ಚಟುವಟಿಕೆ ಮತ್ತು ಸಿದ್ಧಾಂತವನ್ನು ಪ್ರಚಾರ ಮಾಡುವಲ್ಲಿ ಹನಿ ಬಾಬು ಸಹ-ಸಂಚುಕೋರ ಎಂದು ಎನ್‌ಐಎ ಆರೋಪಿಸಿದೆ.
ಈ ಪ್ರಕರಣದಲ್ಲಿ ಅವರನ್ನು ಜುಲೈ 2020 ರಲ್ಲಿ ಬಂಧಿಸಿ ನವಿ ಮುಂಬೈನ ತಲೋಜಾ ಜೈಲಿನಲ್ಲಿ ಇರಿಸಲಾಗಿತ್ತು.
ಈ ಪ್ರಕರಣವು ಡಿಸೆಂಬರ್ 31, 2017 ರಂದು ಪುಣೆಯ ಶನಿವಾರವಾಡದಲ್ಲಿ ನಡೆದ ಎಲ್ಗರ್ ಪರಿಷತ್ ಸಮಾವೇಶದಲ್ಲಿ ಮಾಡಿದ ಪ್ರಚೋದನಕಾರಿ ಭಾಷಣಗಳಿಗೆ ಸಂಬಂಧಿಸಿದೆ. ಈ ಪ್ರಚೋದನಕಾರಿ ಭಾಷಣ ಮರುದಿನ ನಗರದ ಹೊರವಲಯದಲ್ಲಿರುವ ಕೋರೆಗಾಂವ್ ಭೀಮಾ ಯುದ್ಧ ಸ್ಮಾರಕದ ಬಳಿ ಹಿಂಸಾಚಾರಕ್ಕೆ ಕಾರಣವಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಹಿಂಸಾಚಾರದಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದರು ಮತ್ತು ಹಲವಾರು ಜನ ಗಾಯಗೊಂಡಿದ್ದರು.
Advertisement