

ನವದೆಹಲಿ: ಪ್ರಸ್ತಾವಿತ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ಅನ್ನು ಅಗತ್ಯ ವಸ್ತುಗಳ ಮೇಲೆ ವಿಧಿಸಲಾಗುವುದಿಲ್ಲ. ಆದರೆ ಪಾನ್ ಮಸಾಲಾ ಘಟಕಗಳ ಉತ್ಪಾದನಾ ಸಾಮರ್ಥ್ಯದ ಮೇಲೆ ವಿಧಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಲೋಕಸಭೆಗೆ ಮಾಹಿತಿ ನೀಡಿದರು.
ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸೆ ಮಸೂದೆ 2025ನ್ನು ಲೋಕಸಭೆಯಲ್ಲಿ ಚರ್ಚೆಗೆ ಮಂಡಿಸಿ ಮಾತನಾಡಿದ ಸೀತಾರಾಮನ್, ಸೆಸ್‌ನಿಂದ ಬರುವ ಆದಾಯವನ್ನು ನಿರ್ದಿಷ್ಟ ಆರೋಗ್ಯ ಯೋಜನೆಗಳ ಅಡಿಯಲ್ಲಿ ರಾಜ್ಯಗಳೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಹೇಳಿದರು.
ಯಾವುದೇ ಅಗತ್ಯ ವಸ್ತುಗಳ ಮೇಲೆ ವಿಧಿಸಲ್ಲ: "ಇದು ಒಂದು ಸೆಸ್ . ಇದನ್ನು ಯಾವುದೇ ಅಗತ್ಯ ವಸ್ತುಗಳ ಮೇಲೆ ವಿಧಿಸಲ್ಲ. ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುವ ಅನರ್ಹ ಸರಕುಗಳ ಮೇಲೆ ಸೆಸ್ ವಿಧಿಸುವುದು ಈ ಮಸೂದೆಯ ಉದ್ದೇಶವಾಗಿದೆ. ಈ ಸೆಸ್‌ನಿಂದ ಬರುವ ಆದಾಯದ ಒಂದು ಭಾಗವನ್ನು ಆರೋಗ್ಯ ಜಾಗೃತಿ ಅಥವಾ ಇನ್ನಿತರ ಸಂಬಂಧಿತ ಯೋಜನೆಗಳು, ಚಟುವಟಿಕೆಗಳ ಮೂಲಕ ರಾಜ್ಯಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಸರಕು ಮತ್ತು ಸೇವಾ ತೆರಿಗೆ (GST)ಅಡಿಯಲ್ಲಿ ಪಾನ್ ಮಸಾಲಾ ಉತ್ಪನ್ನಗಳ ಬಳಕೆಯ ಆಧಾರದ ಮೇಲೆ ಗರಿಷ್ಠ ಶೇ. 40 ರಷ್ಟು ತೆರಿಗೆ ವಿಧಿಸಲಾಗುವುದು ಮತ್ತು ಈ ಸೆಸ್‌ನಿಂದ ಜಿಎಸ್‌ಟಿ ಆದಾಯದ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ತಿಳಿಸಿದರು.
ಜಿಎಸ್‌ಟಿಗಿಂತ ಹೆಚ್ಚಿನದಾಗಿರುವ ಪ್ರಸ್ತಾವಿತ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ಅನ್ನು ಪಾನ್ ಮಸಾಲಾ ಉತ್ಪಾದನಾ ಕಾರ್ಖಾನೆಗಳಲ್ಲಿನ ಯಂತ್ರಗಳ ಉತ್ಪಾದನಾ ಸಾಮರ್ಥ್ಯದ ಮೇಲೆ ವಿಧಿಸಲಾಗುತ್ತದೆ. ಪ್ರತಿಯೊಂದು ಕಾರ್ಖಾನೆಗೂ ಅವುಗಳ ಉತ್ಪಾದನಾ ಸಾಮರ್ಥ್ಯವನ್ನು ಅವಲಂಬಿಸಿ ಸೆಸ್ ವಿಧಿಸಲಾಗುವುದು ಎಂದು ಸೀತಾರಾಮನ್ ಹೇಳಿದರು.
ಜಿಎಸ್‌ಟಿ ಬಳಕೆಯ ಹಂತದಲ್ಲಿ ವಿಧಿಸಲಾಗುವುದರಿಂದ ಮತ್ತು ಪಾನ್ ಮಸಾಲಾ ಮೇಲೆ ಅಬಕಾರಿ ಸುಂಕವನ್ನು ವಿಧಿಸಲಾಗದ ಕಾರಣ, ಈ ಸೆಸ್ ಅನ್ನು ಪಾನ್ ಮಸಾಲಾ ಘಟಕಗಳ ಉತ್ಪಾದನಾ ಸಾಮರ್ಥ್ಯದ ಮೇಲೆ ವಿಧಿಸಲು ಪ್ರಯತ್ನಿಸಲಾಗುತ್ತಿದೆ.
ಪಾನ್ ಮಸಾಲಾ ಮೇಲೆ ಅಬಕಾರಿ ಸುಂಕವನ್ನು ವಿಧಿಸಲಾಗದ ಕಾರಣ, ಪಾನ್ ಮಸಾಲಾ ಸರಕುಗಳ ಮೇಲೆ ಜಿಎಸ್ ಟಿ ಜೊತೆಗೆ ತೆರಿಗೆ ಹಾಕುವ ಖಾತ್ರಿಗಾಗಿ ಸರ್ಕಾರ ಪ್ರತ್ಯೇಕ ಸೆಸ್ ಮಸೂದೆಯನ್ನು ತರುತ್ತಿದೆ ಎಂದು ಸೀತಾರಾಮನ್ ಹೇಳಿದರು.
ಪ್ರಸ್ತುತ ಪಾನ್ ಮಸಾಲಾ, ತಂಬಾಕು, ಮತ್ತಿತರ ಉತ್ಪನ್ನಗಳು ಶೇ. 28 ರಷ್ಟು ಜಿಎಸ್‌ಟಿ ಮತ್ತು ವಿವಿಧ ದರಗಳಲ್ಲಿ ಪರಿಹಾರ ಸೆಸ್ ನ್ನು ವಿಧಿಸಲಾಗುತ್ತಿದೆ. ಪರಿಹಾರ ಸೆಸ್ ವಿಧಿಸುವುದು ಅಂತ್ಯಗೊಂಡಂತೆ, ಜಿಎಸ್‌ಟಿ ದರ ಶೇ. 40 ಕ್ಕೆ ಏರುತ್ತದೆ. ಹೆಚ್ಚುವರಿಯಾಗಿ, ತಂಬಾಕಿನ ಮೇಲೆ ಅಬಕಾರಿ ಸುಂಕ ಮತ್ತು ಪಾನ್ ಮಸಾಲಾ ಮೇಲೆ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ವಿಧಿಸಲಾಗುತ್ತದೆ.
ಬುಧವಾರ ಲೋಕಸಭೆಯು 1944 ರ ಕೇಂದ್ರ ಅಬಕಾರಿ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮಸೂದೆಯನ್ನು ಅಂಗೀಕರಿಸಿತು. ಇದು ತಂಬಾಕಿನ ಮೇಲೆ ಶೇ. 40 ರಷ್ಟು ಜಿಎಸ್‌ಟಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಅಬಕಾರಿ ಸುಂಕವನ್ನು ವಿಧಿಸುತ್ತದೆ.
Advertisement