

ನವದೆಹಲಿ: ಡಿಸೆಂಬರ್ 4 ಮತ್ತು ಡಿಸೆಂಬರ್ 5 ರಂದು ಎರಡು ದಿನಗಳ ಭಾರತ ಭೇಟಿಗಾಗಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ವಿಶೇಷ ವಿಮಾನದಲ್ಲಿ ಗುರುವಾರ ರಾತ್ರಿ ದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಖುದ್ದು ಪಾಲಂ ವಿಮಾನ ನಿಲ್ದಾಣಕ್ಕೆ ತೆರಳಿ ಭಾರತ–ರಷ್ಯಾ 23ನೇ ವಾರ್ಷಿಕ ಶೃಂಗಸಭೆಗಾಗಿ ದೆಹಲಿಗೆ ಆಗಮಿಸಿದ ಪುಟಿನ್ ಅವರನ್ನು ಸ್ವಾಗತಿಸಿದರು.
ಕಳೆದ ವರ್ಷ ಜುಲೈನಲ್ಲಿ ಪ್ರಧಾನಿ ಮೋದಿ ಅವರು ಮಾಸ್ಕೋಗೆ ಭೇಟಿ ನೀಡಿದ್ದಾಗ ರಷ್ಯಾ ಅಧ್ಯಕ್ಷ ಪುಟಿನ್ ಅವರು ನೀಡಿದ ಆತಿಥ್ಯಕ್ಕೆ ಪ್ರತಿಯಾಗಿ ಪ್ರಧಾನಿ ಮೋದಿ ಅವರು ಇಂದು ರಾತ್ರಿ ಅವರಿಗೆ ಖಾಸಗಿ ಭೋಜನ ಕೂಟ ಆಯೋಜಿಸಿದ್ದಾರೆ.
ಪುಟಿನ್ ಅವರು ಇಂದು ರಾತ್ರಿ ದೆಹಲಿಯ ಐಟಿಸಿ ಮೌರ್ಯದಲ್ಲಿ ಉಳಿದುಕೊಳ್ಳಲಿದ್ದಾರೆ. ಹೀಗಾಗಿ, ಅಲ್ಲಿ ಭಾರಿ ಬಿಗಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.
ರಷ್ಯಾ ಅಧ್ಯಕ್ಷ ಪುಟಿನ್ ಅವರು ನಾಳೆ ಬೆಳಿಗ್ಗೆ ರಾಜ್‌ಘಾಟ್‌ಗೆ ಭೇಟಿ ನೀಡಿ ಮಹಾತ್ಮ ಗಾಂಧಿಯವರಿಗೆ ಗೌರವ ಸಲ್ಲಿಸಲಿದ್ದಾರೆ.
ಭಾರತ–ರಷ್ಯಾ 23ನೇ ವಾರ್ಷಿಕ ಶೃಂಗಸಭೆಯು ಶುಕ್ರವಾರ ನಡೆಯಲಿದ್ದು, ಅದಕ್ಕೂ ಮೊದಲು ರಾಷ್ಟ್ರಪತಿ ಭವನದಲ್ಲಿ ಔಪಚಾರಿಕ ಸ್ವಾಗತ, ನಂತರ ಭಾರತದ ಉನ್ನತ ಮಟ್ಟದ ದ್ವಿಪಕ್ಷೀಯ ಕಾರ್ಯಕ್ರಮಗಳಿಗೆ ಸಾಂಪ್ರದಾಯಿಕ ಸ್ಥಳವಾದ ಹೈದರಾಬಾದ್ ಹೌಸ್‌ನಲ್ಲಿ ಮಾತುಕತೆ ನಡೆಯಲಿದೆ.
Advertisement