

ಡೆಹ್ರಾಡೂನ್: ಉತ್ತರಾಖಂಡದ ಲೋಹಘಾಟ್ ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ ಮದುವೆಗೆ ತೆರಳುತ್ತಿದ್ದ ಜೀಪೊಂದು ಆಳವಾದ ಕಂದಕಕ್ಕೆ ಉರುಳಿ ಬಿದ್ದಿದ್ದು, ಭೀಕರ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದಾರೆ ಮತ್ತು ಐವರು ಗಾಯಗೊಂಡಿದ್ದಾರೆ.
ಜಿಲ್ಲಾ ವಿಪತ್ತು ನಿಯಂತ್ರಣ ಕೊಠಡಿಯ ಪ್ರಕಾರ, ಕುಟುಂಬವೊಂದು ಮದುವೆ ಕಾರ್ಯಕ್ರಮ ಮುಗಿಸಿ ಮಹೀಂದ್ರಾ ಬೊಲೆರೊ ಜೀಪಿನಲ್ಲಿ ಹಿಂತಿರುಗುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿಯ ಬರಾಕೋಟ್ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡು ಕಂದಕಕ್ಕೆ ಉರುಳಿದೆ ಎಂದು ವರದಿಯಾಗಿದೆ. ಬರಾಕೋಟ್ ಬಳಿಯ ಬಾಗ್ಧರ್ ಬಳಿ ಈ ಅಪಘಾತ ಸಂಭವಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪೊಲೀಸರು ಮತ್ತು ಎಸ್‌ಡಿಆರ್‌ಎಫ್ ತಂಡಗಳು ತಕ್ಷಣ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದವು. ಆಳವಾದ ಕಂದಕದಿಂದ ಮೃತರನ್ನು ಹೊರತೆಗೆಯುವುದು "ಅತ್ಯಂತ ಸವಾಲಿನ ಕೆಲಸ" ಎಂದು ಎಸ್‌ಡಿಆರ್‌ಎಫ್ ಕಮಾಂಡೆಂಟ್ ಅರ್ಪಣ್ ಯದುವಂಶಿ ಹೇಳಿದ್ದಾರೆ. ಆದರೆ ನಿರಂತರ ಪ್ರಯತ್ನಗಳ ನಂತರ ಎಲ್ಲರನ್ನೂ ಹೊರತೆಗೆಯಲಾಗಿದೆ.
ಮೃತರನ್ನು ರುದ್ರಪುರದ ಸುಭಾಷನಗರದ ಪ್ರಕಾಶ್ ಚಂದ್ ಉನಿಯಾಲ್ (40); ಕೇವಲ್ ಚಂದ್ರ ಉನಿಯಾಲ್ (35); ಸುರೇಶ್ ನೌಟಿಯಾಲ್ (32); ಭಾವನಾ ಚೌಬೆ (28); ಮತ್ತು ಅವರ ಆರು ವರ್ಷದ ಮಗ ಪ್ರಿಯಾಂಶು ಚೌಬೆ ಎಂದು ಗುರುತಿಸಲಾಗಿದೆ.
ಗಾಯಗೊಂಡವರಲ್ಲಿ ಚಾಲಕ, ಅಲ್ಮೋರಾದ ಸೆರಾಘಾಟ್‌ನ ದೇವಿದತ್ ಪಾಂಡೆ(38); ರುದ್ರಾಪುರದ ಧೀರಜ್ ಉನಿಯಾಲ್ (12); ಗಂಗೊಳ್ಳಿಹಾಟ್‌ನ ಬ್ಯಾಂಕೋಟ್‌ನ ರಾಜೇಶ್ ಜೋಶಿ(14); ದೆಹಲಿಯ ಚೇತನ್ ಚೌಬೆ (5); ಮತ್ತು ಗಂಗೊಳ್ಳಿಹಾಟ್ ನ ಸೇರಘಟ್ಟದ ಭಾಸ್ಕರ್ ಪಾಂಡವ ಎಂದು ಗುರುತಿಸಲಾಗಿದ್ದು, ಅವರನ್ನು ಲೋಹಘಾಟ್ ಉಪಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
Advertisement