

ಚಂಡೀಗಡ: ಪಂಜಾಬ್‌ನಲ್ಲಿ ವಿಧಾನಸಭಾ ಚುನಾವಣೆಗೆ 14 ತಿಂಗಳುಗಳು ಬಾಕಿ ಇರುವಾಗ, ಕ್ರಿಕೆಟಿಗ ಮತ್ತು ರಾಜಕಾರಣಿ ನವಜೋತ್ ಸಿಂಗ್ ಸಿಧು ಅವರು ಸಕ್ರಿಯ ರಾಜಕೀಯಕ್ಕೆ ಮರಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಕಾಂಗ್ರೆಸ್ ಪಕ್ಷ ಸಿದು ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದರೆ ನವಜೋತ್ ಸಿಂಗ್ ಸಿಧು ಸಕ್ರಿಯ ರಾಜಕೀಯಕ್ಕೆ ಕಾಲಿಡುತ್ತಾರೆ ಎಂದು ಅವರ ಪತ್ನಿ ಮತ್ತು ಪಕ್ಷದ ನಾಯಕಿ ನವಜೋತ್ ಕೌರ್ ಸಿಧು ಹೇಳಿದ್ದಾರೆ.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿದೆ ಎಂಬ ಆರೋಪ ಸೇರಿದಂತೆ ಹಲವು ವಿಷಯಗಳ ಕುರಿತು ನಿನ್ನೆ ಪಂಜಾಬ್ ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ ಅವರನ್ನು ಭೇಟಿಯಾದ ನಂತರ ಮಾತನಾಡಿದ ಕೌರ್, ತನ್ನ ಪತಿ ಕಾಂಗ್ರೆಸ್‌ಗೆ ಬದ್ಧರಾಗಿದ್ದಾರೆ ಮತ್ತು ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಗೌರವಿಸುತ್ತಾರೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದರೆ ಒಳ್ಳೆಯದು, ಇಲ್ಲದಿದ್ದರೆ, ಅವರು ಈಗ ಮಾಡುತ್ತಿರುವ ಕೆಲಸದಿಂದಲೇ ಉತ್ತಮ ಹಣ ಗಳಿಸುತ್ತಿದ್ದಾರೆ ಮತ್ತು ಅವರು ಸಂತೋಷವಾಗಿದ್ದಾರೆ ಎಂದರು.
ಪಂಜಾಬ್ ಕಾಂಗ್ರೆಸ್‌ನೊಳಗಿನ 'ಒಳಜಗಳ'ದ ಕಡೆಗೆ ಬೆರಳು ತೋರಿಸಿದ ಅವರು, ಈಗಾಗಲೇ ಮುಖ್ಯಮಂತ್ರಿ ಸ್ಥಾನಕ್ಕಾಗಿ ಐದು ನಾಯಕರು ಆಕಾಂಕ್ಷಿಗಳಾಗಿದ್ದು, ಅವರು ಸಿಧು ಅವರನ್ನು ಮುಂದೆ ಬರಲು ಬಿಡುವುದಿಲ್ಲ ಎಂಬುದನ್ನು ಹೈಕಮಾಂಡ್ ಅರ್ಥಮಾಡಿಕೊಂಡರೆ ಒಳ್ಳೆಯದು ಎಂದರು.
ಯಾವುದೇ ಪಕ್ಷಕ್ಕೆ ದಾನ ಮಾಡಲು ಅವರ ಬಳಿ ಹಣವಿಲ್ಲ, ಆದರೆ ಪಂಜಾಬ್ ಅನ್ನು "ಸುವರ್ಣ ರಾಜ್ಯ"ವನ್ನಾಗಿ ಪರಿವರ್ತಿಸಬಹುದು ಎಂದು ಕೌರ್ ಹೇಳಿದರು. ನಾವು ಯಾವಾಗಲೂ ಪಂಜಾಬ್ ಮತ್ತು ಪಂಜಾಬಿಯತ್‌ಗಾಗಿ ಮಾತನಾಡುತ್ತೇವೆ, ಆದರೆ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳಲು ನಾವು ನೀಡಬಹುದಾದ 500 ಕೋಟಿ ರೂ. ನಮ್ಮ ಬಳಿ ಇಲ್ಲ ಎಂದು ಅವರು ಹೇಳಿದರು.
ಯಾರಾದರೂ ಅವರಿಂದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆಯೇ ಎಂದು ಕೇಳಿದಾಗ, ಯಾರೂ ಅದನ್ನು ಬೇಡಿಕೆ ಇಟ್ಟಿಲ್ಲ, ಆದರೆ 500 ಕೋಟಿ ರೂ. ಸೂಟ್‌ಕೇಸ್ ನೀಡುವವರು ಮುಖ್ಯಮಂತ್ರಿಯಾಗಬಹುದು ಎಂದು ಅವರು ಹೇಳಿದರು.
Advertisement