

ನವದೆಹಲಿ: ಮುಖ್ಯಮಂತ್ರಿ ಹುದ್ದೆಗೆ 500 ಕೋಟಿ ರೂಪಾಯಿ ಕೊಡಬೇಕು ಎಂದು ಹೇಳುವ ಮೂಲಕ ಹೈಕಮಾಂಡ್ ನ ಕೆಂಗಣ್ಣಿಗೆ ಗುರಿಯಾಗಿದ್ದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಪತ್ನಿ ನವಜೋತ್ ಕೌರ್ ಸಿಧುವನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.
ನವಜೋತ್ ಕೌರ್ ಸಿಧು ಡಿಸೆಂಬರ್ 6ರಂದು '500 ಕೋಟಿ ರೂ. ಸೂಟ್‌ಕೇಸ್ ನೀಡುವವರು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾರೆ ಎಂದು ಹೇಳಿದ್ದು ರಾಜಕೀಯ ಹಗ್ಗಜಗ್ಗಾಟಕ್ಕೆ ಕಾರಣವಾಗಿತ್ತು. ಹೇಳಿಕೆ ನೀಡಿದ ಎರಡು ದಿನಗಳ ನಂತರ ಕಾಂಗ್ರೆಸ್ ಈ ಕ್ರಮ ಕೈಗೊಂಡಿದೆ. ತರ್ನ್ ತರಣ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕರಣ್‌ಬೀರ್ ಸಿಂಗ್ ಬುರ್ಜ್‌ಗೆ ಟಿಕೆಟ್ ಕೊಡಲು 5 ಕೋಟಿ ತೆಗೆದುಕೊಳ್ಳಲಾಗಿದೆ ಎಂದು ನವಜೋತ್ ಕೌರ್ ಸಿಧು ಆರೋಪಿಸಿದ್ದರು. ಒಟ್ಟು ಮೊತ್ತ 11 ಕೋಟಿ ತಲುಪಿದೆ. ಹಿರಿಯ ನಾಯಕರ ಆಜ್ಞೆ ಮೇರೆಗೆ ಇದೆಲ್ಲಾ ನಡೆದಿತ್ತು. ಈ ಬಗ್ಗೆ ಹಲವಾರು ಕೌನ್ಸಿಲರ್‌ಗಳು ಸಾಕ್ಷ್ಯ ನೀಡಲು ಸಿದ್ಧರಿದ್ದಾರೆ. ಅವರ ಬಳಿ ದೂರವಾಣಿ ಕರೆಯ ರೆಕಾರ್ಡಿಂಗ್‌ಗಳು ಇವೆ ಎಂದು ಹೇಳಿದ್ದರು.
ತಮ್ಮ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ನವಜೋತ್ ಕೌರ್ ಸಿಧು ನಂತರ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಹೇಳಿಕೆಯನ್ನು ತಿರುಚಲಾಗಿದೆ. ಕಾಂಗ್ರೆಸ್ ಎಂದಿಗೂ ಅವರಿಂದ ಯಾವುದೇ ಹಣವನ್ನು ಕೇಳಿರಲಿಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ ಇದಕ್ಕೂ ಮುನ್ನವೇ ಹೈಕಮಾಂಡ್ ಆಗಲೇ ಕ್ರಮ ಕೈಗೊಂಡಿತ್ತು. ಈ ವಿವಾದವು ಸಿಧು ದಂಪತಿ ಮತ್ತು ಕಾಂಗ್ರೆಸ್ ನಡುವಿನ ಸಂಬಂಧದ ಬಗ್ಗೆ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ನವಜೋತ್ ಸಿಂಗ್ ಸಿಧು ಬಹಳ ಸಮಯದಿಂದ ಪಕ್ಷದ ಚಟುವಟಿಕೆಗಳಿಂದ ದೂರವಿದ್ದು ಅವರ ಪತ್ನಿಯ ಇತ್ತೀಚಿನ ಹೇಳಿಕೆಯು ಪರಿಸ್ಥಿತಿಯನ್ನು ಇನ್ನಷ್ಟು ಜಟಿಲಗೊಳಿಸಿದೆ.
Advertisement