

ನವದೆಹಲಿ: 'ವಂದೇ ಮಾತರಂ' ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಜವಾಹರಲಾಲ್ ನೆಹರು ಅವರನ್ನು ಅವಮಾನಿಸಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಆರೋಪಿಸಿದ್ದಾರೆ.
ಇಂದು ರಾಜ್ಯಸಭೆಯಲ್ಲಿ ಮಾತನಾಡಿದ ಖರ್ಗೆ, 'ವಂದೇ ಮಾತರಂ'ನ ಮೊದಲ ಎರಡು ಚರಣಗಳನ್ನು ಮಾತ್ರ ರಾಷ್ಟ್ರೀಯ ಗೀತೆಯಾಗಿ ಬಳಸುವ ನಿರ್ಧಾರವನ್ನು ಮಹಾತ್ಮ ಗಾಂಧಿ ಮತ್ತು ರವೀಂದ್ರನಾಥ ಟ್ಯಾಗೋರ್‌ರಂತಹ ನಾಯಕರು ಸಾಮೂಹಿಕವಾಗಿ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.
ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಬರೆದ ಹಾಡನ್ನು ಕಾಂಗ್ರೆಸ್ 'ವಿಭಜಿಸಿದೆ' ಎಂದು ಆಡಳಿತಾರೂಢ ಬಿಜೆಪಿ ಆರೋಪ ಮಾಡುತ್ತಿದ್ದಂತೆ, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಖರ್ಗೆ,ಕಾಂಗ್ರೆಸ್ ನಾಯಕರು ಯಾವಾಗಲೂ 'ವಂದೇ ಮಾತರಂ' ಹಾಡುತ್ತಿದ್ದಾರೆ ಎಂದು ಹೇಳಿದರು.
ಕವಿತೆಯ ಎರಡು ಚರಣಗಳನ್ನು ಮಾತ್ರ ರಾಷ್ಟ್ರೀಯ ಗೀತೆಯಾಗಿ ಬಳಸುವ ನಿರ್ಧಾರದ ಹಿಂದೆ ತುಷ್ಟೀಕರಣ ರಾಜಕೀಯವಿದೆ. ವಂದೇ ಮಾತರಂ ಗೀತೆಗೆ ಕತ್ತರಿ ಹಾಕಿದ್ದು ದೇಶದ ವಿಭಜನೆಗೆ ಕಾರಣವಾಯ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದರು.
ಇಂದು 'ವಂದೇ ಮಾತರಂ' ಘೋಷಣೆ ಕೂಗುತ್ತಾ ತಮ್ಮ ಭಾಷಣವನ್ನು ಆರಂಭಿಸಿದ ಖರ್ಗೆ, "ನಾವು ಯಾವಾಗಲೂ ವಂದೇ ಮಾತರಂ ಹಾಡುತ್ತಲೇ ಇದ್ದೇವೆ. ಆದರೆ ವಂದೇ ಮಾತರಂ ಹಾಡದವರು ಈಗ ಅದನ್ನು ಹಾಡಲು ಪ್ರಾರಂಭಿಸಿದ್ದಾರೆ. ಅದು ವಂದೇ ಮಾತರಂನ ಶಕ್ತಿ. ಇದು ರಾಷ್ಟ್ರೀಯ ಹಬ್ಬ, ಚರ್ಚೆಯಲ್ಲ ಎಂದರು.
"1921 ರಲ್ಲಿ ಅಸಹಕಾರ ಚಳುವಳಿ ಪ್ರಾರಂಭವಾದಾಗ, ಕಾಂಗ್ರೆಸ್ ಸದಸ್ಯರು ವಂದೇ ಮಾತರಂ ಜಪಿಸುತ್ತಾ ಜೈಲಿಗೆ ಹೋಗುತ್ತಿದ್ದರು. ನೀವು ಏನು ಮಾಡಿದ್ದೀರಿ? ನೀವು ಬ್ರಿಟಿಷರಿಗಾಗಿ ಕೆಲಸ ಮಾಡುತ್ತಿದ್ದೀರಿ" ಎಂದು ಖರ್ಗೆ ವಾಗ್ದಾಳಿ ನಡೆಸಿದರು.
"ನೀವು ನಮಗೆ ದೇಶಭಕ್ತಿಯನ್ನು ಕಲಿಸುತ್ತಿದ್ದೀರಾ? ನೀವು ದೇಶಭಕ್ತಿಗೆ ಹೆದರಿ ಬ್ರಿಟಿಷರಿಗೆ ಸೇವೆ ಸಲ್ಲಿಸಿದ್ದೀರಿ ಎಂದು ಬಿಜೆಪಿಗೆ ತಿರುಗೇಟು ನೀಡಿದರು.
ಜವಾಹರಲಾಲ್ ನೆಹರೂ ಅವರನ್ನು ಅವಮಾನಿಸಲು ಪ್ರಧಾನಿ ಮೋದಿ ಎಲ್ಲಾ ಅವಕಾಶವನ್ನು ಬಳಸಿಕೊಳ್ಳುತ್ತಾರೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಅಂಗೀಕರಿಸಿದ ಕವಿತೆಯ ಎರಡು ಚರಣಗಳನ್ನು ಮಾತ್ರ ಹಾಡುವ ನಿರ್ಣಯವನ್ನು ನೆಹರೂ ಒಬ್ಬರೇ ತೆಗೆದುಕೊಂಡಿಲ್ಲ. ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಬೋಸ್, ಮದನ್ ಮೋಹನ್ ಮಾಳವಿಯಾ ಮತ್ತು ಆಚಾರ್ಯ ಜೆ.ಬಿ. ಕೃಪಲಾನಿ ಅವರಂತಹ ನಾಯಕರು ಸಾಮೂಹಿಕವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಖರ್ಗೆ ಹೇಳಿದರು.
ಕವಿತೆಯ ಮೊದಲ ಎರಡು ಚರಣಗಳನ್ನು ಹಾಡಿನ ಉಳಿದ ಭಾಗದಿಂದ ಬೇರ್ಪಡಿಸುವುದರಿಂದ "ಯಾವುದೇ ತೊಂದರೆ ಇಲ್ಲ" ಎಂದು ಟ್ಯಾಗೋರ್ ಹೇಳಿರುವುದನ್ನು ಕಾಂಗ್ರೆಸ್ ಅಧ್ಯಕ್ಷರು ಉಲ್ಲೇಖಿಸಿದರು.
Advertisement