

ಪಣಜಿ: 25 ಜನರನ್ನು ಬಲಿ ಪಡೆದ ಅಗ್ನಿ ದುರಂತದ ನಂತರ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಮಂಗಳವಾರ ಸಹೋದರರಾದ ಸೌರಭ್ ಲುತ್ರಾ ಮತ್ತು ಗೌರವ್ ಲುತ್ರಾ ಒಡೆತನದ ವಾಗೇಟರ್‌ನಲ್ಲಿರುವ ಅಕ್ರಮ 'ರೋಮಿಯೋ ಲೇನ್' ಬೀಚ್ ಶ್ಯಾಕ್ ನೈಟ್‌ಕ್ಲಬ್ ಅನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಕಳೆದ ಶನಿವಾರ ಮಧ್ಯರಾತ್ರಿ ಅರ್ಪೋರಾದ 'ಬಿರ್ಚ್ ಬೈ ರೋಮಿಯೋ ಲೇನ್' ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 25 ಜನ ಸಾವನ್ನಪ್ಪಿದ ಕೆಲವೇ ಗಂಟೆಗಳ ನಂತರ, ಲುತ್ರಾ ಸಹೋದರರು ಥೈಲ್ಯಾಂಡ್‌ಗೆ ಪಲಾಯನ ಮಾಡಿದ್ದಾರೆ. ಈ ಬೀಚ್ ಶ್ಯಾಕ್, ಸೌರಭ್ ಲುತ್ರಾ ಮತ್ತು ಗೌರವ್ ಲುತ್ರಾ ಒಡೆತನದ ಮೂರನೇ ನೈಟ್‌ಕ್ಲಬ್ ಆಗಿದೆ.
ಸಿಎಂ ಸಾವಂತ್ ಅವರು ನೈಟ್‌ಕ್ಲಬ್ ತೆರವುಗೊಳಿಸಲು ಎಲ್ಲಾ ಔಪಚಾರಿಕತೆಗಳನ್ನು ಪೂರ್ಣಗೊಳಿಸಲು ಮತ್ತು ವಾಗೇಟರ್‌ನಲ್ಲಿರುವ ಬೀಚ್ ಶ್ಯಾಕ್ ಅನ್ನು ಕೆಡವಲು ಉತ್ತರ ಗೋವಾ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದಾರೆ ಎಂದು ಸಿಎಂಒ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ನೈಟ್‌ಕ್ಲಬ್ ಅನ್ನು ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ. ಮಂಗಳವಾರ ಇದನ್ನು ಕೆಡವಲಾಗುವುದು. ಜಿಲ್ಲಾಡಳಿತವು ಎಲ್ಲಾ ಯಂತ್ರೋಪಕರಣಗಳನ್ನು ಸಿದ್ಧವಾಗಿಟ್ಟಿದೆ" ಎಂದು ಅಧಿಕಾರಿ ಹೇಳಿದ್ದಾರೆ.
ಗೋವಾ ಪೊಲೀಸರ ಪ್ರಕಾರ, ಡಿಸೆಂಬರ್ 7 ರಂದು ಬೆಳಗ್ಗೆ 5.30ಕ್ಕೆ ಇಂಡಿಗೋ ವಿಮಾನ 6E 1073 ಮೂಲಕ ಲುಥ್ರಾ ದಂಪತಿ ಫುಕೆಟ್‌ಗೆ ಪರಾರಿಯಾಗಿದ್ದು, ಸೌರಭ್ ಮತ್ತು ಗೌರವ್ ಲುಥ್ರಾ ವಿರುದ್ಧ ಇಂಟರ್‌ಪೋಲ್ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದೆ.
ಎಫ್‌ಐಆರ್ ದಾಖಲಾದ ತಕ್ಷಣ ಆರಂಭಿಸಲಾದ ಶೋಧ ಕಾರ್ಯಾಚರಣೆ ಸಮಯದಲ್ಲಿ ಪೊಲೀಸರು, ಆರೋಪಿಗಳು ಪರಾರಿಯಾಗಿರುವುದನ್ನು ಪತ್ತೆ ಮಾಡಿದ್ದಾರೆ. ಘಟನೆಯ ನಂತರ ಮಧ್ಯರಾತ್ರಿಯ ಸುಮಾರಿಗೆ ಇಬ್ಬರೂ ಭಾರತವನ್ನು ತೊರೆದಿದ್ದಾರೆ ಎಂದು ವಲಸೆ ದಾಖಲೆಗಳು ದೃಢಪಡಿಸಿವೆ.
ಶನಿವಾರ ರಾತ್ರಿ ನಡೆದ ಅಗ್ನಿ ದುರಂತದ ನಂತರ, ಜಿಲ್ಲಾಡಳಿತವು ಸೋಮವಾರ ಉತ್ತರ ಗೋವಾದ ಅಸ್ಸಾಗಾವೊದಲ್ಲಿರುವ ಈ ನೈಟ್‌ಕ್ಲಬ್ ಮತ್ತು ಇನ್ನೊಂದು ನೈಟ್‌ಕ್ಲಬ್ ಅನ್ನು ಬಂದ್ ಮಾಡಿದೆ.
Advertisement