

ನವದೆಹಲಿ: ಪಶ್ಚಿಮ ಬಂಗಾಳ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಭಾರತೀಯ ಚುನಾವಣಾ ಆಯೋಗ(ಇಸಿಐ) ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ನಡೆಸುತ್ತಿದ್ದು, ಬೂತ್ ಮಟ್ಟದ ಅಧಿಕಾರಿಗಳಿಗೆ(ಬಿಎಲ್‌ಒ) ಬೆದರಿಕೆ ಹಾಕಲಾಗುತ್ತಿದೆ ಮತ್ತು ಎಸ್ಐಆರ್ ಗೆ ಅಡ್ಡಿಪಡಿಸಲಾಗುತ್ತಿದೆ ಎಂಬ ವರದಿಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ಗಂಭೀರವಾಗಿ ಪರಿಗಣಿಸಿದೆ.
ಇದೇ ವೇಳೆ ಎಸ್ಐಆರ್ ಗೆ "ಸಹಕಾರ ನೀಡದ" ಕೆಲವು ರಾಜ್ಯ ಸರ್ಕಾರಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಬಿಎಲ್‌ಒಗಳು ಬೆದರಿಕೆ ಎದುರಿಸುತ್ತಿರುವ ಅಥವಾ ಅಧಿಕಾರಿಗಳು ಎಸ್‌ಐಆರ್ ಪ್ರಕ್ರಿಯೆಯನ್ನು ಕೈಗೊಳ್ಳುವಲ್ಲಿ ಅಡೆತಡೆಗಳನ್ನು ಎದುರಿಸುವ ಯಾವುದೇ ಸಂದರ್ಭವನ್ನು ತಕ್ಷಣವೇ ತನ್ನ ಗಮನಕ್ಕೆ ತರುವಂತೆ ಇಸಿಐಗೆ ನಿರ್ದೇಶಿಸಿದೆ. ಅಲ್ಲದೆ "ಅಂತಹ ವಿಷಯಗಳನ್ನು ನಮ್ಮ ಗಮನಕ್ಕೆ ತಂದರೆ, ನಾವು ಸೂಕ್ತ ಆದೇಶಗಳನ್ನು ರವಾನಿಸುತ್ತೇವೆ" ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಪರಿಸ್ಥಿತಿಯನ್ನು ಪರಿಹರಿಸಲು ವಿಫಲವಾದರೆ "ಅರಾಜಕತೆಗೆ ಕಾರಣವಾಗಬಹುದು" ಎಂದು ಸರ್ವೋಚ್ಛ ನ್ಯಾಯಾಲಯ ಎಚ್ಚರಿಸಿದೆ ಮತ್ತು ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣಾ ಪ್ರಕ್ರಿಯೆ ಸುಗಮ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಇಸಿಐಗೆ ಸೂಚಿಸಿದೆ.
SIR ಪ್ರಕ್ರಿಯೆಯಲ್ಲಿ ತೊಡಗಿರುವ BLO ಗಳು ಮತ್ತು ಇತರ ಸಿಬ್ಬಂದಿ ಎದುರಿಸುತ್ತಿರುವ ಬೆದರಿಕೆಗಳನ್ನು ತಡೆಯಲು ಅಗತ್ಯವಿರುವ ಎಲ್ಲಾ ಸಾಂವಿಧಾನಿಕ ಅಧಿಕಾರವನ್ನು ಚುನವಣಾ ಆಯೋಗ ಹೊಂದಿದೆ ಎಂದು ಸುಪ್ರೀಂ ಕೋರ್ಟ್ ಒತ್ತಿ ಹೇಳಿದೆ.
Advertisement