

ಮುಂಬೈ: ಪುಣೆ ಭೂ ಹಗರಣದ ಎಫ್‌ಐಆರ್‌ನಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪುತ್ರ ಪಾರ್ಥ್ ಪವಾರ್ ಅವರ ಹೆಸರು ಇಲ್ಲದಿರುವುದನ್ನು ಬಾಂಬೆ ಹೈಕೋರ್ಟ್ ಬುಧವಾರ ಪ್ರಶ್ನಿಸಿದೆ.
ಪುಣೆಯ ಪ್ರಮುಖ 40 ಎಕರೆ ಭೂಮಿ ಡೀಲ್ ನಲ್ಲಿ ನಲ್ಲಿ ಪಾರ್ಥ್ ಪವಾರ್ ಪಾತ್ರವಿದೆ. ಅವರ ಒಡೆತನದ ಅಮೇಡಿಯಾ ಎಂಟರ್‌ಪ್ರೈಸಸ್ ಎಲ್‌ಎಲ್‌ಪಿ, ಸುಮಾರು 2,000 ಕೋಟಿ ಮೌಲ್ಯದ ಮಹಾರ್ ವತನ್ ಭೂಮಿಯನ್ನು ಖರೀದಿಸಿದ್ದು, ಐಟಿ ಹಬ್ ಅಭಿವೃದ್ಧಿಪಡಿಸುವ ಯೋಜನೆ ಹೇಳುವ ಮೂಲಕ ಸ್ಟಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕದಲ್ಲಿ 25 ಕೋಟಿ ಕಬಳಿಸಿರುವ ಆರೋಪ ಕೇಳಿಬಂದಿದೆ. ರೂ. 500 ರೂಪಾಯಿಯ ಸ್ಟ್ಯಾಂಪ್ ಪೇಪರ್‌ನಲ್ಲಿ ಭಾರೀ ಅವ್ಯವಹಾರ ನಡೆದಿದೆ ಎನ್ನಲಾಗಿದೆ.
ಅಚ್ಚರಿ ವ್ಯಕ್ತಪಡಿಸಿದ ಹೈಕೋರ್ಟ್: ವಿಚಾರಣೆಯ ವೇಳೆ ಸಂಸ್ಥೆಯು ಪಾರ್ಥ್ ಪವಾರ್ ಅವರದ್ದಾಗಿದ್ದರೂ ಎಫ್ ಐಆರ್ ನಲ್ಲಿ ಅವರ ಹೆಸರು ಇಲ್ಲದಿರುವ ಬಗ್ಗೆ ಹೈಕೋರ್ಟ್ ಅಚ್ಚರಿ ವ್ಯಕ್ತಪಡಿಸಿತು. ಪೊಲೀಸರು ಆರು ಜನರ ವಿರುದ್ಧ ಪ್ರಕರಣ ದಾಖಲಿಸಿ ಇಬ್ಬರನ್ನು ಬಂಧಿಸಿದ್ದಾರೆ.
ಸಂಸ್ಥೆಯಲ್ಲಿ ಶೇ. 10 ರಷ್ಟು ಪಾಲನ್ನು ಹೊಂದಿರುವ ಪಾರ್ಥ್‌ನ ಪಾಲುದಾರ ದಿಗ್ವಿಜಯ್ ಪಾಟೀಲ್ ಅವರ ಹೆಸರನ್ನು FIR ನಲ್ಲಿ ಉಲ್ಲೇಖಿಸಲಾಗಿದೆ. ಆದರೆ ಶೇ. 90 ರಷ್ಟು ಮಾಲೀಕತ್ವ ಹೊಂದಿರುವ ಪಾರ್ಥ್ ಹೆಸರಿಲ್ಲದಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಆರೋಪಿ ಶೀತಲ್ ತೇಜ್ವಾನಿ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮಾಧವ್ ಜಮ್‌ಧರ್, ಪುಣೆ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಆಕೆಯ ಅರ್ಜಿ ವಿಚಾರಣೆಗೆ ಬಾಕಿ ಇರುವಾಗ ಅವರು ಹೈಕೋರ್ಟ್‌ಗೆ ಯಾಕೆ ಮೊರೆ ಹೋದರು ಎಂದು ಕೇಳಿದರು. ಇದು ಡಿಸಿಎಂ ಪುತ್ರನಿಗೆ ಸಂಬಂಧಿಸಿದ ಪ್ರಕರಣವೇ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ಪೀಠವು ಪ್ರಶ್ನಿಸಿತು.
ಪಾರ್ಥ್ ಪವಾರ್ ಯಾಕೆ ನಾಪತ್ತೆ? ದೃಢೀಕರಣದ ಬಳಿಕ ನ್ಯಾಯಾಧೀಶರು, ಎಫ್‌ಐಆರ್‌ನಲ್ಲಿ ಪಾರ್ಥ್ ಪವಾರ್ ಅವರ ಹೆಸರು ಯಾಕೆ ಕಾಣೆಯಾಗಿದೆ? ಎಂದು ಪ್ರಶ್ನಿಸಿದರು. ತನಿಖೆ ಮುಂದುವರಿದಿದೆ ಎಂದ ಪೊಲೀಸರ ಹೇಳಿಕೆಗೆ ಅತೃಪ್ತಿ ವ್ಯಕ್ತಪಡಿಸಿದ ಪೀಠ, ಜಾಮೀನು ಅರ್ಜಿಯನ್ನು ತಕ್ಷಣವೇ ಹಿಂಪಡೆಯುವಂತೆ ತೇಜ್ವಾನಿ ಅವರ ವಕೀಲರಿಗೆ ಸೂಚಿಸಿತು.
ಕಾಂಗ್ರೆಸ್ ಕೇಳುತ್ತಿರುವ ಪ್ರಶ್ನೆಗಳನ್ನು ಹೈಕೋರ್ಟ್ ಎತ್ತಿದೆ. ಅವ್ಯವಹಾರದಲ್ಲಿ ಭಾಗಿಯಾಗಿರುವ ಸಂಸ್ಥೆಯ ಪ್ರಮುಖ ಮಾಲೀಕರಾಗಿದ್ದರೂ ಎಫ್‌ಐಆರ್‌ನಲ್ಲಿ ಪಾರ್ಥ್ ಪವಾರ್ ಹೆಸರು ಕಾಣೆಯಾಗಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಾಲ್ ಪ್ರಶ್ನಿಸಿದ್ದಾರೆ. ಪಾರ್ಥ್ ಪವಾರ್ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. ನ್ಯಾಯಯುತ ತನಿಖೆಗಾಗಿ ಅಜಿತ್ ಪವಾರ್ ಡಿಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ಅಂಜಲಿ ದಮಾನಿ ಒತ್ತಾಯಿಸಿದ್ದಾರೆ.
Advertisement