

ಭಾರತೀಯರ ಜಗದ್ವಿಖ್ಯಾತ ಅತಿದೊಡ್ಡ ಹಬ್ಬ ದೀಪಾವಳಿ ಬಗ್ಗೆ ಸಂತಸದ ಸುದ್ದಿ ಬಂದಿದೆ. ಯುನೆಸ್ಕೋದ ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ನಮ್ಮ ದೀಪಾವಳಿ ಹಬ್ಬ ಸೇರ್ಪಡೆಯಾಗಿದೆ.
ದೆಹಲಿಯ ಕೆಂಪು ಕೋಟೆಯಲ್ಲಿ ಆಯೋಜಿಸಲಾದ ಯುನೆಸ್ಕೋದ ಪ್ರಮುಖ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಭಾರತ ದೇಶವು ಅಮೂರ್ತ ಸಾಂಸ್ಕೃತಿಕ ಪರಂಪರೆಯ ರಕ್ಷಣೆಗಾಗಿ ಅಂತರಸರ್ಕಾರಿ ಸಮಿತಿಯ (ICH) ಅಧಿವೇಶನವನ್ನು ಆಯೋಜಿಸುತ್ತಿರುವುದು ಇದೇ ಮೊದಲು. ಡಿಸೆಂಬರ್ 8 ರಿಂದ 13 ರವರೆಗೆ ಕೆಂಪು ಕೋಟೆಯಲ್ಲಿ ಸಮಿತಿಯ 20 ನೇ ಅಧಿವೇಶನ ನಡೆಯುತ್ತಿದೆ.
ದೀಪಾವಳಿ ಹಬ್ಬವನ್ನು ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಯುನೆಸ್ಕೋದ ಪ್ರತಿನಿಧಿ ಪಟ್ಟಿಗೆ ಸೇರಿಸಲಾಗಿದೆ ಎಂದು ಯುನೆಸ್ಕೋ ಘೋಷಿಸುತ್ತಿದ್ದಂತೆ 'ವಂದೇ ಮಾತರಂ' ಮತ್ತು 'ಭಾರತ್ ಮಾತಾ ಕಿ ಜೈ' ಮಂತ್ರಗಳು ದೆಹಲಿಯ ಕೆಂಪುಕೋಟೆ ಸುತ್ತ ಮೊಳಗಿದವು.
ಭಾರತವು ಪ್ರಸ್ತುತ ಯುನೆಸ್ಕೋದ ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರತಿನಿಧಿ ಪಟ್ಟಿಯಲ್ಲಿ 15 ಅಂಶಗಳನ್ನು ಸೇರಿಸಿಕೊಂಡಿದೆ. ಇವುಗಳಲ್ಲಿ ಕುಂಭಮೇಳ, ಕೋಲ್ಕತ್ತಾದ ದುರ್ಗಾ ಪೂಜೆ, ಗುಜರಾತ್‌ನ ಗರ್ಭಾ ನೃತ್ಯ, ಯೋಗ, ವೇದ ಪಠಣದ ಸಂಪ್ರದಾಯ ಮತ್ತು 'ರಾಮಾಯಣ' ಮಹಾಕಾವ್ಯದ ಸಾಂಪ್ರದಾಯಿಕ ಪ್ರದರ್ಶನವಾದ ರಾಮಲೀಲಾ ಸೇರಿವೆ.
ಪ್ರಧಾನಿ ಮೋದಿ ಸಂತಸ
ಭಾರತ ಮತ್ತು ಪ್ರಪಂಚದಾದ್ಯಂತದ ಇರುವ ಭಾರತೀಯರಿಗೆ ಇದು ರೋಮಾಂಚನಪಡಿಸುವ ಸುದ್ದಿ.
ನಮಗೆ, ದೀಪಾವಳಿ ನಮ್ಮ ಸಂಸ್ಕೃತಿ ಮತ್ತು ನೀತಿಯೊಂದಿಗೆ ಬಹಳ ನಿಕಟ ಸಂಬಂಧ ಹೊಂದಿದೆ. ಇದು ನಮ್ಮ ನಾಗರಿಕತೆಯ ಆತ್ಮ. ಇದು ಜ್ಞಾನೋದಯ ಮತ್ತು ಸದಾಚಾರವನ್ನು ನಿರೂಪಿಸುತ್ತದೆ. ಯುನೆಸ್ಕೋ ಅಮೂರ್ತ ಪರಂಪರೆಯ ಪಟ್ಟಿಗೆ ದೀಪಾವಳಿ ಹಬ್ಬ ಸೇರ್ಪಡೆಯು ಹಬ್ಬದ ಜಾಗತಿಕ ಜನಪ್ರಿಯತೆಗೆ ಮತ್ತಷ್ಟು ಕೊಡುಗೆ ನೀಡುತ್ತದೆ.
ಪ್ರಭು ಶ್ರೀ ರಾಮನ ಆದರ್ಶಗಳು ನಮಗೆ ಶಾಶ್ವತವಾಗಿ ಮಾರ್ಗದರ್ಶನ ನೀಡಲಿ ಎಂದು ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಪ್ರಧಾನಿ ಬರೆದುಕೊಂಡಿದ್ದಾರೆ.
Advertisement