

ನವದೆಹಲಿ: ಜೆಎನ್‌ಯು (ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ) ಮಾಜಿ ವಿದ್ಯಾರ್ಥಿ ಮತ್ತು ದೆಹಲಿ ಗಲಭೆಯ ಮಾಸ್ಟರ್ ಮೈಂಡ್ ಎಂದು ಆರೋಪಿಸಿರುವ ಉಮರ್ ಖಾಲಿದ್‌ಗೆ ದೆಹಲಿ ನ್ಯಾಯಾಲಯವು ಇಂದು 14 ದಿನಗಳ ಮಧ್ಯಂತರ ಜಾಮೀನು ನೀಡಿದೆ. ತನ್ನ ಸಹೋದರಿಯ ಮದುವೆಯಲ್ಲಿ ಪಾಲ್ಗೊಳ್ಳಲು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ (ಎಎಸ್‌ಜೆ) ಸಮೀರ್ ಬಾಜ್‌ಪೈ ಡಿಸೆಂಬರ್ 16ರಿಂದ ಡಿಸೆಂಬರ್ 29 ರವರೆಗೆ ಖಾಲಿದ್‌ಗೆ ಜಾಮೀನು ನೀಡಿದೆ.
ಡಿಸೆಂಬರ್ 27ರಂದು ಖಾಲಿದ್ ನ ಸಹೋದರಿಯ ಮದುವೆ ನಡೆಯಲಿದ್ದು ಡಿಸೆಂಬರ್ 14 ರಿಂದ ಡಿಸೆಂಬರ್ 29 ರವರೆಗೆ ಜಾಮೀನು ಕೋರಿ ಕರ್ಕಾರ್ಡೂಮಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಲಾಗಿತ್ತು. ಆದರೆ ಕೋರ್ಟ್ ಕೇವಲ 14 ದಿನಗಳ ಜಾಮೀನು ನೀಡಿದೆ. ಜಾಮೀನು ಅವಧಿಯಲ್ಲಿ ಅರ್ಜಿದಾರರಿಗೆ ಸಾಮಾಜಿಕ ಮಾಧ್ಯಮ ಬಳಸಲು ಅವಕಾಶವಿಲ್ಲ. ಕುಟುಂಬ, ಸಂಬಂಧಿಕರು ಮತ್ತು ಸ್ನೇಹಿತರನ್ನು ಮಾತ್ರ ಭೇಟಿಯಾಗಲು ಅವಕಾಶ ಎಂದು ನ್ಯಾಯಾಲಯ ಹೇಳಿದೆ. ಈ ಅವಧಿಯಲ್ಲಿ ಅವರು ತಮ್ಮ ಮನೆಯಲ್ಲಿ ಅಥವಾ ಅವರು ನಿರ್ದಿಷ್ಟಪಡಿಸಿದಂತೆ ವಿವಾಹ ಸಮಾರಂಭಗಳು ನಡೆಯುವ ಸ್ಥಳದಲ್ಲಿ ಮಾತ್ರ ಇರಬೇಕೆಂದು ನ್ಯಾಯಾಲಯವು ಷರತ್ತು ವಿಧಿಸಿದೆ.
ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು, ಅರ್ಜಿದಾರರ ಸಹೋದರಿಯ ವಿವಾಹವನ್ನು ಪರಿಗಣಿಸಿ ಮಧ್ಯಂತರ ಜಾಮೀನು ಅರ್ಜಿಯನ್ನು ಸ್ವೀಕರಿಸಿದ್ದು ಅರ್ಜಿದಾರರಿಗೆ ಡಿಸೆಂಬರ್ 16 ರಿಂದ ಡಿಸೆಂಬರ್ 29 ರವರೆಗೆ ಮಧ್ಯಂತರ ಜಾಮೀನು ನೀಡಲಾಗುತ್ತದೆ. ಕೆಲವು ಷರತ್ತುಗಳಿಗೆ ಒಳಪಟ್ಟು, 20,000 ವೈಯಕ್ತಿಕ ಬಾಂಡ್ ಮತ್ತು ಅದೇ ಮೊತ್ತದ ಇಬ್ಬರು ಶ್ಯೂರಿಟಿಗಳನ್ನು ಒದಗಿಸಬೇಕು ಎಂದು ಹೇಳಿದೆ.
ತನ್ನ ತೀರ್ಪಿನಲ್ಲಿ, ನ್ಯಾಯಾಲಯವು ಉಮರ್ ಖಾಲಿದ್ ಅವರನ್ನು ಮಧ್ಯಂತರ ಜಾಮೀನು ಅವಧಿ ಮುಗಿದ ನಂತರ ಡಿಸೆಂಬರ್ 29 ರ ಸಂಜೆ ಸಂಬಂಧಿತ ಜೈಲಿನ ಜೈಲು ಅಧೀಕ್ಷಕರ ಮುಂದೆ ಶರಣಾಗುವಂತೆ ನಿರ್ದೇಶಿಸಿದೆ. ನಂತರ ಜೈಲು ಅಧಿಕಾರಿಗಳು ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸುತ್ತಾರೆ. ಈ ಆದೇಶದ ಪ್ರತಿಯನ್ನು ಸಂಬಂಧಿತ ಜೈಲಿಗೆ ಕಳುಹಿಸಲಾಗುತ್ತದೆ ಮತ್ತು ಖಾಲಿದ್ ಅವರ ವಕೀಲರಿಗೆ ನೀಡಲಾಗುತ್ತದೆ.
Advertisement