

ಪಣಜಿ: ಖಾನಾಪುರದ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ವಿಮಾನದಲ್ಲಿ ತೆರಳುತ್ತಿದ್ದಾಗ ದಿಢೀರ್ ಅಸ್ವಸ್ಥಗೊಂಡ ಅಮೆರಿಕದ ಯುವತಿಗೆ ಚಿಕಿತ್ಸೆ ನೀಡಿ, ಪ್ರಾಣ ಕಾಪಾಡಿದ್ದಾರೆ. ಗೋವಾದಿಂದ ದೆಹಲಿಗೆ ಹೊರಟಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ.
ಅಮೆರಿಕ ಮೂಲದ ಯುವತಿಗೆ ಇದ್ದಕ್ಕಿದ್ದಂತೆ ಕೈ-ಕಾಲುಗಳಲ್ಲಿ ನಡುಕ ಉಂಟಾಗಿದ್ದು, ಕೆಲವೇ ಕ್ಷಣದಲ್ಲಿ ಆಕೆ ಮೂರ್ಛೆ ಹೋಗಿದ್ದಾಳೆ. ಇದನ್ನು ಗಮನಿಸಿದ ಅಂಜಲಿ ನಿಂಬಾಳ್ಕರ್ ಅವರು ಕೂಡಲೇ ಯುವತಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ.
ಶ್ವಾಸಕೋಶದ ಮೇಲೆ ಎರಡೂ ಕೈಗಳನ್ನಿಟ್ಟು ಪಂಪ್ ಮಾಡಿದ್ದಾರೆ. ಬಳಿಕ ಆಕೆ ಉಸಿರಾಡಲು ಶುರು ಮಾಡಿದ್ದಾರೆ. ಇದಾದ ಅರ್ಧಗಂಟೆಯಲ್ಲೇ ಯುವತಿ ಮತ್ತೆ ಕುಸಿದುಬಿದ್ದಿದ್ದು, ಅಂಜಲಿ ನಿಂಬಾಳ್ಕರ್ ಅವರ ಪ್ರಯತ್ನದಿಂದಾಗಿ ಮತ್ತೆ ಜೀವ ಉಳಿಯಿತು ಎಂದು ವರದಿಯಾಗಿದೆ.
ಅಲ್ಲದೇ, ವಿಮಾನ ದೆಹಲಿ ತಲುಪುವವರೆಗೂ ಆಕೆಯ ಪಕ್ಕದಲ್ಲೇ ಇದ್ದು ಆರೈಕೆ ಮಾಡಿದ್ದಾರೆ. ವಿಮಾನ ದೆಹಲಿ ನಿಲ್ದಾಣ ತಲುಪುತ್ತಿದ್ದಂತೆ ಅಂಬುಲೆನ್ಸ್ ಸಿದ್ಧವಿದೆಯೇ ಎಂಬುದನ್ನ ಖಚಿತಪಡಿಸಿಕೊಂಡರಲ್ಲದೇ, ತಕ್ಷಣ ಆಕೆಯನ್ನ ಆಸ್ಪತ್ರೆ ಸಾಗಿಸಲು ನೆರವಾಗಿದ್ದಾರೆ. ಅಂಜಲಿ ನಿಂಬಾಳ್ಕರ್ ಅವರ ಈ ಕಾಯಕಕ್ಕೆ ಪೈಲಟ್ ಸೇರಿದಂತೆ ವಿಮಾನ ಸಿಬ್ಬಂದಿ ಹಾಗೂ ಸಹ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.
ಅಂಜಲಿ ನಿಂಬಾಳ್ಕರ್ ರಾಜ್ಯ ಕಾಂಗ್ರೆಸ್ ವಕ್ತಾರರಾಗಿದ್ದಾರೆ. ಅವರು 2018 ರಿಂದ 2023 ರವರೆಗೆ ಕರ್ನಾಟಕ ವಿಧಾನಸಭೆಯಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರವನ್ನು ಪ್ರತಿನಿಧಿಸಿದ್ದರು
Advertisement