

ಈಗ ಚಳಿಗಾಲ ಹೊರಗೆ ವಾತಾವರಣದಲ್ಲಿ ದಟ್ಟ ಮಂಜು ಕವಿದಿರುತ್ತದೆ. ಹರಿಯಾಣದ ಹೆದ್ದಾರಿಗಳಲ್ಲಿ ಇಂದು ಭಾನುವಾರ ಮುಂಜಾನೆ ದಟ್ಟವಾದ ಮಂಜು ಕವಿದಿದ್ದರಿಂದ ಎರಡು ಪ್ರಮುಖ ಅಪಘಾತಗಳಲ್ಲಿ ಹಲವಾರು ವಾಹನಗಳು ಜಖಂಗೊಂಡಿರುವ ಘಟನೆ ನಡೆದಿದ್ದು ಕೆಲವು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಹರ್ಯಾಣದ ಹಿಸಾರ್‌ನಲ್ಲಿ, ರಾಷ್ಟ್ರೀಯ ಹೆದ್ದಾರಿ 52 ರ ಧಿಕ್ತಾನಾ ಮೋಡಾದಲ್ಲಿ ಬೆಳಗ್ಗೆ 8 ಗಂಟೆ ಸುಮಾರಿಗೆ ಸರಣಿ ಡಿಕ್ಕಿ ಸಂಭವಿಸಿದೆ. ಎರಡು ಹರ್ಯಾಣ ರಸ್ತೆ ಸಾರಿಗೆ ಬಸ್‌ಗಳು, ಒಂದು ಡಂಪರ್ ಟ್ರಕ್, ಹಲವು ಕಾರುಗಳು, ದ್ವಿಚಕ್ರ ವಾಹನಗಳು ಒಂದರ ಹಿಂದೆ ಒಂದರಂತೆ ಸತತವಾಗಿ ಡಿಕ್ಕಿ ಹೊಡೆದಿದ್ದು ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೈತಾಲ್ ರಸ್ತೆ ಸಾರಿಗೆ ಬಸ್ ಡಂಪರ್ ಟ್ರಕ್‌ಗೆ ಡಿಕ್ಕಿ ಹೊಡೆದ ನಂತರ ಘಟನೆ ನಡೆದಿದೆ. ನಂತರ ಹಿಂದಿನಿಂದ ಬಂದ ಮತ್ತೊಂದು ರಾಜ್ಯ ಸಾರಿಗೆ ಬಸ್ ಈಗಾಗಲೇ ಅಪಘಾತಕ್ಕೀಡಾದ ವಾಹನಗಳಿಗೆ ಡಿಕ್ಕಿ ಹೊಡೆದಿದೆ.
ರಸ್ತೆ ಗೋಚರತೆ ತೀರಾ ಕೆಳಮಟ್ಟಕ್ಕೆ ಕುಸಿದಿದ್ದರಿಂದ ಒಂದು ಕಾರು ಮತ್ತು ನಂತರ ಒಂದು ಬೈಕ್ ಕೂಡ ಸಿಲುಕಿಕೊಂಡವು. ಅಪಘಾತದಲ್ಲಿ ನೂರಾರು ಪ್ರಯಾಣಿಕರು ಸಿಲುಕಿಕೊಂಡರು. ಆದರೆ ಸಾವು-ನೋವುಗಳಾಗದೆ ಪಾರಾಗಿದ್ದಾರೆ.
ರೇವಾರಿಯ ರಾಷ್ಟ್ರೀಯ ಹೆದ್ದಾರಿ 352 ರಲ್ಲಿ ನಡೆದ ಪ್ರತ್ಯೇಕ ಅಪಘಾತದಲ್ಲಿ, ಕಡಿಮೆ ಗೋಚರತೆಯಿಂದಾಗಿ ಮೂರರಿಂದ ನಾಲ್ಕು ಬಸ್‌ಗಳು ಡಿಕ್ಕಿ ಹೊಡೆದಿದ್ದು, ಇದರಿಂದಾಗಿ ಬಸ್‌ಗಳು ಜಖಂಗೊಂಡಿವೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಯಿತು.
ಕಳೆದ ಕೆಲವು ದಿನಗಳಿಂದ ಹರಿಯಾಣದಲ್ಲಿ ತೀವ್ರ ಶೀತಗಾಳಿ ಬೀಸುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನವು 4 ಡಿಗ್ರಿ ಸೆಲ್ಸಿಯಸ್ ನಿಂದ 6 ಡಿಗ್ರಿ ಸೆಲ್ಸಿಯಸ್ ನಡುವೆ ಇದ್ದು, ನಿರಂತರ ದಟ್ಟವಾದ ಮಂಜು ಕವಿದು ವಾಹನ ಸವಾರರಿಗೆ ಸವಾಲಾಗಿದೆ.
Advertisement