

ನವದೆಹಲಿ: ಮತಗಳ್ಳತನ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಚುನಾವಣಾ ಆಯೋಗದ ಪರವಾಗಿ ಮಾತನಾಡುವಾಗ "ನಡುಗುವ ಕೈಗಳಿಂದ ಸ್ಪಷ್ಟನೆ ನೀಡಿರುವುದಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭಾನುವಾರ ಆರೋಪಿಸಿದ್ದಾರೆ. ಚುನಾವಣಾ ಸುಧಾರಣೆಗಳ ಕುರಿತು ಲೋಕಸಭೆಯ ಚರ್ಚೆಯ ಸಂದರ್ಭದಲ್ಲಿ ಇಬ್ಬರ ನಡುವೆ ಇತ್ತೀಚೆಗೆ ನಡೆದ ವಾಗ್ವಾದವನ್ನು ಉಲ್ಲೇಖಿಸಿದ ರಾಹುಲ್, ಆರೋಪಗಳಿಗೆ ಪ್ರತಿಕ್ರಿಯಿಸುವಾಗ ಶಾ ಆತಂಕಗೊಂಡಿದ್ದರು ಎಂದರು.
ರಾಮ ಲೀಲಾ ಮೈದಾನದಲ್ಲಿ ನಡೆದ 'ವೋಟ್ ಚೋರ್ ಗಡ್ಡಿ ಛೋಡ್' ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ ಅಧಿಕಾರದಲ್ಲಿದ್ದಾಗ ಮಾತ್ರ ಧೈರ್ಯವನ್ನು ತೋರಿಸುತ್ತದೆ. ಗೃಹ ಸಚಿವರ ವರ್ತನೆಯು ವಾಸ್ತವವನ್ನು ಪ್ರತಿಬಿಂಬಿಸಿದಂತೆ ಕಂಡುಬಂದಿತು. ಅಮಿತ್ ಶಾ ಅವರು ಸಂಸತ್ತಿನಲ್ಲಿ ನಡುಗುವ ಕೈಗಳಿಂದ ಸ್ಪಷ್ಟನೆ ನೀಡಿದರು. ನನ್ನ ಸುದ್ದಿಗೋಷ್ಠಿಯಲ್ಲಿ ಚರ್ಚೆಗೆ ಅವರಿಗೆ ನಾನು ಸವಾಲು ಹಾಕಿದ್ದೇನೆ. ಯಾರು ಸತ್ಯ ಮಾತನಾಡುತ್ತಾರೆ ಎಂಬುದನ್ನು ದೇಶಕ್ಕೆ ತೋರಿಸೋಣ. ಅವರ ನಡುಗುವ ಕೈಗಳನ್ನು ನೀವು ನೋಡಿದ್ದೀರಾ? ಅವರು ಯಾಕೆ ನಡುಗುತ್ತಿದ್ದರು ಎಂದು ನಾನು ನಿಮಗೆ ಹೇಳಬೇಕೇ?" ಏಕೆಂದರೆ ಅವರು ಶಕ್ತಿ ಇದ್ದಾಗ ಮಾತ್ರ ಧೈರ್ಯವಾಗಿ ಇರುತ್ತಾರೆ ಎಂದರು.
ಕರ್ನಾಟಕ, ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ವ್ಯವಸ್ಥಿತವಾಗಿ "ಮತ ಕಳ್ಳತನ" ಕುರಿತು ಅವರ ಮೂರು ಸುದ್ದಿಗೋಷ್ಠಿಗಳ ಬಗ್ಗೆ ಚರ್ಚೆ ನಡೆಸುವಂತೆ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಸವಾಲು ಹಾಕಿದ್ದರೆ, ಅಮಿತ್ ಶಾ, ಚುನಾವಣಾ ಆಯೋಗ ಮತ್ತು ಬಿಜೆಪಿ ಮೇಲೆ ಕಾಂಗ್ರೆಸ್ ಮಾಡಿದ ಆರೋಪಗಳಿಗೆ ಉತ್ತರಿಸಿದರು. ರಾಹುಲ್ ಟೀಕೆಗಳಿಗೆ ಉತ್ತರಿಸಿದ್ದ ಅಮಿತ್ ಶಾ, ನಿಮ್ಮ ಹಠದಿಂದ ಸಂಸತ್ತನ್ನು ನಡೆಸಲು ಸಾಧ್ಯವಿಲ್ಲ. ತಾಳ್ಮೆಯಿಂದಿರಬೇಕು ಎಂದು ಹೇಳಿದ್ದರು.
ಚುನಾವಣಾ ಆಯೋಗ ಬಿಜೆಪಿಯೊಂದಿಗೆ ಕೆಲಸ: ಅಲ್ಲದೇ, 'CEC ಮತ್ತು ಇತರ ಚುನಾವಣಾ ಆಯುಕ್ತರ ಮಸೂದೆ, 2023' ಅನ್ನು ಬದಲಾಯಿಸಲಾಗುವುದು, ಕಾಂಗ್ರೆಸ್ ಅಧಿಕಾರಕ್ಕೆ ಮರಳಿದ ನಂತರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಚುನಾವಣಾ ಆಯುಕ್ತ ಸುಖಬೀರ್ ಸಂಧು ಮತ್ತು ವಿವೇಕ್ ಜೋಶಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ರಾಹುಲ್ ಪ್ರತಿಭಟನೆಯಲ್ಲಿ ಪ್ರತಿಜ್ಞೆ ಮಾಡಿದರು.
ಚುನಾವಣಾ ಆಯುಕ್ತರಿಗೆ ಬಿಗ್ ವಾರ್ನಿಂಗ್: ಸುಖಬೀರ್ ಸಂಧು, ಜ್ಞಾನೇಶ್ ಕುಮಾರ್, ವಿವೇಕ್ ಜೋಶಿ ಹೆಸರುಗಳನ್ನು ನೆನಪಿಡಿ. ಚುನಾವಣಾ ಆಯೋಗವು ಬಿಜೆಪಿಯೊಂದಿಗೆ ಕೆಲಸ ಮಾಡುತ್ತಿದೆ. ನರೇಂದ್ರ ಮೋದಿ ಅವರಿಗಾಗಿ ಕಾನೂನನ್ನು ಬದಲಾಯಿಸಿದ್ದಾರೆ ಮತ್ತು ಚುನಾವಣಾ ಆಯುಕ್ತರು ಏನೇ ಮಾಡಿದ್ದರೂ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲ್ಲ. ನೀವು ಭಾರತದ EC, ಮೋದಿಯ EC ಅಲ್ಲ. ನಾವು ಈ ಕಾನೂನನ್ನು ಬದಲಾಯಿಸುತ್ತೇವೆ ಮತ್ತು ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ" ಎಂದು ಅವರು ಹೇಳಿದರು.
ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಯನ್ನು ಉಲ್ಲೇಖಿಸುವ ಮೂಲಕ ಕಾಂಗ್ರೆಸ್ ಮತ್ತು ಆರೆಸ್ಸೆಸ್ ಸಿದ್ಧಾಂತಗಳಲ್ಲಿನ ವ್ಯತ್ಯಾಸಗಳನ್ನು ರಾಹುಲ್ ಗಾಂಧಿ ಸೂಚಿಸಿದರು.
ಆರ್‌ಎಸ್‌ಎಸ್ ಮುಖ್ಯಸ್ಥ ಡಾ.ಮೋಹನ್ ಭಾಗವತ್ ಅವರ ಹೇಳಿಕೆಯನ್ನು ಕೇಳಿ ಜಗತ್ತು ಸತ್ಯದತ್ತ ನೋಡುವುದಿಲ್ಲ. ಅಧಿಕಾರವನ್ನು ನೋಡುತ್ತದೆ. ಯಾರಿಗೆ ಅಧಿಕಾರವಿದೆಯೋ ಅವರನ್ನು ಗೌರವಿಸುತ್ತದೆ. ಇದು ಮೋಹನ್ ಭಾಗವತ್ ಅವರ ಚಿಂತನೆಯಾಗಿದೆ. ಈ ಸಿದ್ಧಾಂತ ಆರ್‌ಎಸ್‌ಎಸ್‌ನದ್ದು. ನಮ್ಮ ಸಿದ್ಧಾಂತ, ಭಾರತದ ಸಿದ್ಧಾಂತ. ಹಿಂದೂ ಧರ್ಮದ ಸಿದ್ಧಾಂತ, ವಿಶ್ವದ ಪ್ರತಿಯೊಂದು ಧರ್ಮದ ಸಿದ್ಧಾಂತವು ಸತ್ಯವಾಗಿದೆ ಎಂದು ಹೇಳುತ್ತದೆ. ಸತ್ಯವನ್ನು ಎತ್ತಿಹಿಡಿಯುವ ಮೂಲಕ, ಸತ್ಯದ ಹಿಂದೆ ನಿಲ್ಲುವ ಮೂಲಕ, ನರೇಂದ್ರ ಮೋದಿ ಮತ್ತು ಆರ್ ಎಸ್ ಎಸ್ ಸರ್ಕಾರ ಅಮಿತ್ ಶಾ ಅವರನ್ನು ದೇಶದಿಂದ ಕಿತ್ತೊಗೆಯುತ್ತೇವೆ ಎಂಬ ಗ್ಯಾರಂಟಿ ನೀಡುತ್ತೇನೆ ಎಂದು ರಾಹುಲ್ ಗಾಂಧಿ ಗುಡುಗಿದರು.
Advertisement